
ನೆಲ್ಯಾಡಿ: ಮಾದಕವಸ್ತು ಸೇವನೆ ಮಾಡಿರುವುದಲ್ಲದೇ ಮಾರಾಟ ಮಾಡಲು ತೆರಳುತ್ತಿದ್ದ ವ್ಯಕ್ತಿಯೋರ್ವನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೌಕ್ರಾಡಿ ಗ್ರಾಮದ ದೋಂತಿಲ ನಿವಾಸಿ ತೌಫಿಕ್(22ವ.) ಬಂಧಿತ ಆರೋಪಿ.
ಈತ ನ.30ರಂದು ಬೆಳಿಗ್ಗೆ 11.15ಕ್ಕೆ ಆಟೋ ರಿಕ್ಷಾ ಚಲಾಯಿಸಿಕೊಂಡು ಬಂಟ್ವಾಳ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ವೇಳೆ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ಪೊಲೀಸರು ನಿಲ್ಲಿಸುವಂತೆ ಸೂಚಿಸಿದರೂ ನಿಲ್ಲಿಸದೇ ಮುಂದಕ್ಕೆ ಚಲಾಯಿಸಿ ರಿಕ್ಷಾದಿಂದ ಇಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಪೊಲೀಸರು ಹಿಡಿದು ವಿಚಾರಿಸಿದಾಗ ಎಂಡಿಎಂಎ ಎಂಬ ಮಾದಕ ವಸ್ತು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ತನ್ನಲ್ಲಿ ಮಾದಕ ವಸ್ತುವಾದ ಎಂಡಿಎಂಎ ಒಂದು ಪ್ಯಾಕೇಟ್ ಇದ್ದು ಅದನ್ನು ಸ್ನೇಹಿತ ಪೆರ್ನೆ ಸಲೀಂ ಎಂಬಾತ ಸೇವನೆ ಮಾಡಲು ಮತ್ತು ಮಾರಾಟ ಮಾಡಲು ನೀಡಿದ್ದು, ಇದನ್ನು ಗಿರಾಕಿಗಳಿಗೆ ಮಾರಾಟ ಮಾಡಲು ತೆರಳುತ್ತಿರುವುದಾಗಿ ತಿಳಿಸಿದ್ದಾನೆ.
ಆರೋಪಿಯನ್ನು ಬಂಧಿಸಿ ಮಾದಕ ವಸ್ತು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






