ನೆಲ್ಯಾಡಿ: ಫೆಂಗಲ್ ಚಂಡಮಾರುತದ ಪ್ರಭಾವದಿಂದ ನ.2ರಂದು ಸುರಿದ ಭಾರೀ ಮಳೆಗೆ ಕೊಣಾಲು ಗ್ರಾಮದ ಆರ್ಲ ನಿವಾಸಿ, ಆಟೋ ಚಾಲಕ ಜೇಮ್ಸ್ ಎಂಬವರ ಮನೆ ಭಾಗಶ: ಹಾನಿಗೊಂಡಿದೆ.
ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಜೇಮ್ಸ್ ಅವರ ಮನೆಯ ಒಂದು ಭಾಗದ ಪಕ್ಕಾಸು, ರೀಪು ಮುರಿದಿದ್ದು, ಹಂಚುಗಳು ಕೆಳಕ್ಕೆ ಬಿದ್ದು ಹಾನಿಗೊಂಡಿವೆ. ಘಟನೆ ವೇಳೆ ಜೇಮ್ಸ್, ಅವರ ಪತ್ನಿ ಕೆಲಸಕ್ಕೆ ಹೋಗಿದ್ದು ಮಕ್ಕಳು ಶಾಲೆಗೆ ಹೋಗಿದ್ದರು. ಸಂಜೆ ವೇಳೆಗೆ ಸ್ಥಳೀಯರ ನೆರವಿನಿಂದ ಮನೆಗೆ ಟರ್ಪಾಲು ಹೊದಿಸಲಾಗಿದೆ. ಜೇಮ್ಸ್ ಹಾಗೂ ಅವರ ಮನೆಯವರು ರಾತ್ರಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು.
ಕೊಣಾಲು ಗ್ರಾಮ ಸಹಾಯಕ ಆನಂದ ಅವರು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿದ್ದು ರೂ.25 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.