ಸರಕಾರಿ ಜಾಗದಲ್ಲಿನ ಮನೆ ನೆಲಸಮ ಪ್ರಕರಣ; ನೂತನ ಮನೆ ನಿರ್ಮಿಸಿ ಕೊಡುವ ಕೆಲಸಕ್ಕೆ ಚಾಲನೆ

ಶೇರ್ ಮಾಡಿ

ಕೊಕ್ಕಡ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರಕಾರಿ ಜಾಗದಲ್ಲಿದ್ದ ಮನೆಯನ್ನು ಕಡಬ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ನ.13ರಂದು ಬೆಳ್ಳಂಬೆಳಿಗ್ಗೆ ನೆಲಸಮಗೊಳಿಸಿದ ಪರಿಣಾಮ ಮನೆಯಲ್ಲಿ ವಾಸ್ತವ್ಯವಿದ್ದ ವೃದ್ಧ ದಂಪತಿ ಮುತ್ತುಸ್ವಾಮಿ ಹಾಗೂ ರಾಧಮ್ಮ ಬೀದಿಯಲ್ಲೇ ಕಾಲ ಕಳೆಯುವಂತಾಗಿತ್ತು. ದಲಿತ ಹಕ್ಕು ಸಮಿತಿ ನೇತೃತ್ವದಲ್ಲಿ ಸಮಾನ‌ಮನಸ್ಕ‌ ಸಂಘಟನೆಗಳಿಂದ ಅಂಬೇಡ್ಕರ್ ಪರಿನಿರ್ವಾಣ ದಿನವಾದ ಡಿ.6ರಂದು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರಮದಾನದ ಮೂಲಕ ವೃದ್ಧ ದಂಪತಿಗಳಿಗೆ ನೂತನ ಮನೆ ನಿರ್ಮಿಸಿ ಕೊಡುವ ಕೆಲಸಕ್ಕೆ ಚಾಲನೆ ನೀಡಲಾಯಿತು.

ದಲಿತ ಸಮಿತಿಯ ಬೆಳ್ತಂಗಡಿ ತಾಲೂಕಿನ ಕಾರ್ಯದರ್ಶಿ ಈಶ್ವರಿ ಅವರು ಅಂಬೇಡ್ಕರ್ ಗೀತೆಯನ್ನು ಹಾಡಿ ಮಾತನಾಡಿದ ಅವರು ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರ ಎಂಬ ಭಾವನೆ ಇದೆ ಆದರೆ ಅವರು ಮಾಡಿದ ಸಂವಿಧಾನವನ್ನು ಪ್ರತಿಯೊಬ್ಬರು ಉಪಯೋಗಿಸಿಕೊಳ್ಳುತ್ತಿದ್ದಾರೆ. ಜನಗಳಿಗೆ ತೊಂದರೆ ಆದಾಗ ಮಾತ್ರ ಅವರು ಬರೆದ ಸಂವಿಧಾನದ ನೆನಪಾಗುವುದು. ದೇಶದ ಅನ್ಯಾಯ, ದಬ್ಬಾಳಿಕೆ, ಅಸಮಾನತೆಯ ವಿರುದ್ಧ ಪ್ರತಿಭಟನೆ ಮಾಡಿದಂತ ಮೇರು ವ್ಯಕ್ತಿತ್ವ ಅವರದ್ದು. ಅಂಬೇಡ್ಕರ್ ಅವರು ನಿಧನರಾದ ಸಂದರ್ಭ ಇಡೀ ಜಗತ್ತಿನ 193 ದೇಶಗಳು ಅವರ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಗೌರವ ಸಲ್ಲಿಸಿದ್ದರು. ಸಮಾಜದಲ್ಲಿ ಶಾಶ್ವತವಾಗಿ ಇರಬೇಕಾದರೆ ಈ ದೇಶದಲ್ಲಿ ದುಡಿಯುವ, ಶೋಷಣೆಗೆ ಒಳಗಾದವರ ಬದುಕಿನಲ್ಲಿ ನಾವು ಸ್ಪೂರ್ತಿಯಾಗಿ ಅವರ ಜೊತೆ ಕೆಲಸ ಮಾಡಿ ಸಹಾಯ ಮಾಡಬೇಕು ಎಂದರು.

ನ್ಯಾಯವಾದಿ ಬಿ.ಎಂ.ಭಟ್ ಮಾತನಾಡಿ ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾದ ಇಂದು ಮನೆಯ ಪುನ ನಿರ್ಮಾಣಕ್ಕೆ ಹೊರಟಿದ್ದೇವೆ. ಇಂದಿಗೂ ಅವರ ಆದರ್ಶಗಳನ್ನು ಹೆಜ್ಜೆ ಹೆಜ್ಜೆಗೂ ಪರಿನಿರ್ವಾಣ ಮಾಡುತ್ತಿದ್ದೇವೆ. ಇಂದು ವೃದ್ಧ ದಂಪತಿಗಳಿಗೆ ಮನೆ ನಿರ್ಮಾಣ ಮಾಡುವುದರೊಂದಿಗೆ, ಪ್ರತಿಯೊಬ್ಬರು ಅಂಬೇಡ್ಕರ್ ಅವರ ಆದರ್ಶ, ತತ್ವಗಳನ್ನು ಪಾಲಿಸುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು ಎಂದರು.

ಬೆಳ್ತಂಗಡಿ ಯೂತ್ ಕಾಂಗ್ರೆಸ್ ನ ಅಧ್ಯಕ್ಷರಾದ ಎಸ್.ಕೆ. ಹಕೀಂ, ಮುತ್ತುಸ್ವಾಮಿ, ರಾಧಮ್ಮ ದಂಪತಿಗಳು ಹಾಗೂ ಹಲವು ಸಂಘಟನೆಯ ಮುಖಂಡರುಗಳು ಉಪಸ್ಥಿತರಿದ್ದರು. ಸಾಮಾಜಿಕ ಹೋರಾಟಗಾರ ಶಾಮರಾಜ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಎಲ್ಲರೂ ಒಟ್ಟಾಗಿ ವೃದ್ಧ ದಂಪತಿಗಳಿಗೆ ಶ್ರಮದಾನದ ಮೂಲಕ ಮನೆ ನಿರ್ಮಿಸಿ ಕೊಡುವ ಕೆಲಸ ಮಾಡಿದರು.

Leave a Reply

error: Content is protected !!