ಉಪ್ಪಿನಂಗಡಿ: ಅಪರಿಚಿತ ವ್ಯಕ್ತಿಯ ಪೋನ್ ಕರೆ ಸ್ವೀಕರಿಸಿದ ತಕ್ಷಣ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿರು ಪ್ರಕರಣ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಗುರುವಾರ ಬೆಳಿಗ್ಗೆ ಪೋನ್ ಕರೆಯೊಂದು ಬಂದಿದ್ದು, ಕರೆ ಸ್ವೀಕರಿಸಿದಾಗ ಕರೆ ಮಾಡಿದ ವ್ಯಕ್ತಿ ಪ್ರತಿಕ್ರಿಯೆ ನೀಡಲಿಲ್ಲ. ಬಳಿಕ ಕರೆ ಕಡಿತಗೊಂಡಿತ್ತು. ಸಂಶಯಕ್ಕೀಡಾಗಿ ಟ್ರೂ ಕಾಲರ್ ಮೂಲಕ ಕರೆಯ ಮೂಲವನ್ನು ಶೋಧಿಸಿದ ಅವರಿಗೆ ಅದರಲ್ಲಿ ವಂಚನಾ ಕರೆ ಎಂಬ ಸಂದೇಶ ಲಭಿಸಿತು. ಅಷ್ಟರಲ್ಲಿ ಅವರ ಮೊಬೈಲ್ ನಂಬರ್ ಲಿಂಕ್ ಆಗಿದ್ದ ಐಪಿಪಿಬಿ ಖಾತೆಯಿಂದ ₹ 161 ಹಾಗೂ ₹ 14,839 ಆಟೊ ಪೇ ಆಗಿದೆ ಎಂಬ ಸಂದೇಶ ಬಂದಿತ್ತು.
ಈ ಬಗ್ಗೆ ಐಪಿಪಿಬಿ ಬಗ್ಗೆ ಇಲಾಖೆ ಅಧಿಕಾರಿಗಳಲ್ಲಿ ದೂರು ಸಲ್ಲಿಸಿದಾಗ ಆಟೊ ಪೇಯಲ್ಲಿ ₹ 161 ವರ್ಗಾವಣೆಗೊಂಡಿದ್ದು, ಖಾತೆಯಲ್ಲಿ ₹14,839 ಇಲ್ಲದೆ ಇದ್ದುದರಿಂದ ತಡೆ ಹಿಡಿಯಲಾಗಿತ್ತು. ಅದೇ ಸಂಖ್ಯೆಯಿಂದ ಮತ್ತೊಂದು ಕರೆ ಬಂದಿದ್ದು, ಆಗ ಅವರು ಕರೆ ಸ್ವೀಕರಿಸಲಿಲ್ಲ.
ಅಪರಿಚಿತ ವ್ಯಕ್ತಿ 68778220051 ಸಂಖ್ಯೆಯಿಂದ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ಕೂಡಲೇ ಖಾತೆಯಲ್ಲಿದ್ದ ಹಣ ಆಟೊ ಪೇಗೆ ಮೂಲಕ ವರ್ಗಾವಣೆಗೊಂಡಿರುವುದು ಅಚ್ಚರಿ ಮೂಡಿಸಿದೆ. ಪ್ರಕರಣದ ಬಗ್ಗೆ ಸೈಬರ್ ಕ್ರೈಂ ವಿಭಾಗದ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.