ಅರಸಿನಮಕ್ಕಿ: ಕಸದ ರಾಶಿಗೆ ಸಿಗಬೇಕಿದೆ ಶಾಶ್ವತ ಮುಕ್ತಿ

ಶೇರ್ ಮಾಡಿ

ತುಕ್ಕು ಹಿಡಿಯುತ್ತಿರುವ ತ್ಯಾಜ್ಯ ಸಂಗ್ರಹದ ವಾಹನ || ಜಾಗವಿದ್ದರೂ ಕಟ್ಟಡ ನಿರ್ಮಾಣಕ್ಕೆ ಮೀನ ಮೇಷ ಅಧಿಕಾರಿಗಳಿಂದ

ಕೊಕ್ಕಡ: ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಗ್ರಾಪಂಗಳಲ್ಲಿ ಘನ ತ್ಯಾಜ್ಯ ಘಟಕ, ನೈರ್ಮಲ್ಯ ಬಗ್ಗೆ ಗ್ರಾಮೀಣ ಜನರಲ್ಲಿ ತಿಳುವಳಿಕೆ ತೀರ ಕಡಿಮೆ. ಅದರಲ್ಲೂ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ಆಗದಿರುವುದರಿಂದ ಹಳ್ಳಿ ರಸ್ತೆಗಳು ತ್ಯಾಜ್ಯದಿಂದ ಕೂಡಿರುವುದನ್ನು ಮನಗಂಡು ಸಂಗ್ರಹವಾದ ಘನ ತ್ಯಾಜ್ಯವನ್ನು ಸ್ಥಳೀಯವಾಗಿಯೇ ವಿಲೇವಾರಿ ಮಾಡುವ ಸಲುವಾಗಿ ಪ್ರತಿ ಗ್ರಾ.ಪಂಗಳಲ್ಲಿ ಘನ ತ್ಯಾಜ್ಯ ಘಟಕ ನಿರ್ಮಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ತಿಳಿಸಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸು ನನಸು ಮಾಡುವ ಉದ್ದೇಶದಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸರಕಾರ ಸ್ಥಾಪನೆ ಮಾಡಿದೆ. ಆದರೆ ಇದಕ್ಕೆ ಅಪವಾದವೆಂಬಂತೆ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಗ್ರಾಮ ಪಂಚಾಯಿತಿಯಲ್ಲಿ ಇದುವರೆಗೆ ಕಸ ವಿಲೇವಾರಿಗಾಗಿ ಘನ ತ್ಯಾಜ್ಯ ಘಟಕ ಇನ್ನೂ ಸ್ಥಾಪನೆಯಾಗದೆ ಇರುವುದು ವಿಪರ್ಯಾಸವಾಗಿದೆ.

ಜಾಗ ಮೀಸಲು:
ಸುಮಾರು 3 ವರ್ಷದ ಹಿಂದೆಯೇ ರೆಖ್ಯ ಸಮೀಪದ ಕೆರೆಜಾಲು ಎಂಬಲ್ಲಿ 45 ಸೆಂಟ್ಸ್ ಜಾಗವನ್ನು ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಾಗವನ್ನು ಮೀಸಲಿಡಲಾಗಿದೆ. ಕಂದಾಯ ಇಲಾಖೆಯಿಂದ ಸರ್ವೆ ಕಾರ್ಯ ನಡೆದು ಗ್ರಾಮ ಪಂಚಾಯಿತಿಗೆ ನೀಡಲಾಗಿದೆ. ಸುಮಾರು ಮೂರು ವರ್ಷದ ಹಿಂದೆಯೇ ಜಿಲ್ಲಾ ಪಂಚಾಯತಿಯಿಂದ ತ್ಯಾಜ್ಯ ಸಂಗ್ರಹ ಮಾಡಲು ವಾಹನವನ್ನು ನೀಡಲಾಗಿದ್ದು. ಇದೀಗ ವಾಹನವು ಬಳಕೆಯಾಗದೆ ನಿರುಪಯುಕ್ತವಾಗಿದೆ.

ಗ್ರಾಮ ಸಭೆಯಲ್ಲಿ ನಿರ್ಣಯ:
ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಆದಷ್ಟು ಬೇಗ ಮೀಸಲಿಟ್ಟ ಜಾಗದಲ್ಲಿ ನಿರ್ಮಾಣ ಮಾಡಬೇಕು, ಕಸಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂಬುದಾಗಿ ಗ್ರಾಮ ಸಭೆ ಹಾಗೂ ಸಾಮಾನ್ಯ ಸಭೆಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಟೆಂಡರ್ ರದ್ದತಿ:
ಕಳೆದ 6 ತಿಂಗಳ ಹಿಂದೆ 13.5 ಲಕ್ಷ ವೆಚ್ಚದಲ್ಲಿ ಘಟಕದ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಕೊನೆ ಕ್ಷಣದಲ್ಲಿ ಟೆಂಡರ್ ರದ್ದತಿಗೊಂಡಿತು.

ಉಪಯೋಗ:
ಕಸ, ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಕುರಿತು ಆಸಕ್ತಿ ತೋರುವ ಮಹಿಳೆಯರಿಗೆ ವಾಹನ ಚಾಲನೆ ತರಬೇತಿ ನೀಡಲು ಸರಕಾರ ಅವಕಾಶ ಕಲ್ಪಿಸಿದೆ. ವಿಲೇವಾರಿ ಕಾರ‍್ಯದಲ್ಲಿ ಹೆಚ್ಚು ಮಹಿಳೆಯರು ಭಾಗವಹಿಸುವಂತೆ ಮಾಡಲು ಉತ್ತೇಜನ ಕಾರ‍್ಯಕ್ರಮ ಹಮ್ಮಿಕೊಳ್ಳಬಹುದಾಗಿದೆ. ಮರು ಬಳಕೆ ತ್ಯಾಜ್ಯ ಮಾರಾಟ, ತ್ಯಾಜ್ಯ ವಸ್ತುಗಳ ಮರು ಬಳಕೆಯಿಂದ ದೊರೆಯುವ ಆದಾಯವನ್ನು ಕಸ, ಘನತ್ಯಾಜ್ಯ ವಿಲೇವಾರಿ ಕಾರ‍್ಯ ನಿರ್ವಹಿಸುವ ಒಕ್ಕೂಟಕ್ಕೆ ನೀಡಬೇಕಿದೆ. ಹಸಿ ತ್ಯಾಜ್ಯವನ್ನು ಸಮುದಾಯ ಮಟ್ಟದಲ್ಲಿ ಗೊಬ್ಬರವಾಗಿ ಮಾರಾಟಕ್ಕೆ ಅನುಮತಿ ಇದೆ. ಆರ್ಥಿಕ ಸ್ವಾವಲಂಬನೆ, ಆದಾಯ ಸಂಗ್ರಹಕ್ಕೆ ಅತೀ ಹೆಚ್ಚು ಅವಕಾಶ ಇದ್ದು ಲಾಭ ಇದೆ. ಅನುದಾನ ಕೊರತೆ ಆದಲ್ಲಿ 15ನೇ ಹಣಕಾಸು, ಸಂಸತ್‌ ಸದಸ್ಯರ ಪ್ರದೇಶಾಭಿವೃದ್ಧಿ, ನರೇಗಾ, ಸುವರ್ಣ ಗ್ರಾಮೋದಯ ಯೋಜನೆಯಿಂದ ಕಸ, ಘನತ್ಯಾಜ್ಯ ವಿಲೇವಾರಿ ನಿರ್ವಹಣೆಗೆ ಹಣ ಪಡೆಯಬಹುದಾಗಿದೆ.

Leave a Reply

error: Content is protected !!