ನೆಲ್ಯಾಡಿ: ಉದನೆ ಸೈಂಟ್ ಆಂಟನೀಸ್ ಪ್ರೌಢ ಶಾಲೆ ಹಾಗೂ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಇದರ ಶಾಲಾ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ , ಸಂಸ್ಥೆ ಬೆಳೆದು ಬಂದ ರೀತಿ, ಊರ ಪರವೂರ, ಪೂರ್ವವಿದ್ಯಾರ್ಥಿಗಳ ಸಹಕಾರವನ್ನು ಸ್ಮರಿಸಿ, ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿದರು. ಎಲ್ಲರಿಗೂ ಕ್ರಿಸ್ಮಸ್ ಶುಭಾಶಯ ಕೋರಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೈಂಟ್ ಮೆರೀಸ್ ಹೈಸ್ಕೂಲ್ ಮರ್ಧಾಳ ಇದರ ಮುಖ್ಯಗುರುಗಳಾದ ಈಶೋ ಫಿಲೀಪ್ ಮಾತನಾಡಿ, ಎಲ್ಲರಲ್ಲೂ ದೇವರು ಒಂದಲ್ಲ ಒಂದು ಪ್ರತಿಭೆ ಸೃಷ್ಠಿಸಿರುತ್ತಾರೆ, ಅದು ಗುಡಿಸಲಲ್ಲಿ ಹುಟ್ಟಿ ಅರಮನೆಯಲ್ಲಿ ಸಾಯುತ್ತದೆ. ವಿದ್ಯಾರ್ಥಿಗಳು ಬದುಕಲು ಕಲಿಯಬೇಕು, ಸವಾಲುಗಳನ್ನು ಎದುರಿಸಲು ಕಲಿಯಬೇಕು, ಸ್ವಾವಲಂಬಿಯಾಗಬೇಕು ಎಂದರು.
ನೆಲ್ಯಾಡಿ ಸಂತ ಅಲ್ಫೋನ್ಸಾ ದೇವಾಲಯದ ಧರ್ಮಗುರುಗಳಾದ ರೆ.ಫಾ.ಶಾಜಿ ಮ್ಯಾಥ್ಯೂ ವೆಟ್ಟಂತಡತ್ತಿಲ್ ಮಾತನಾಡಿ, ಏಸು ಕ್ರಿಸ್ತ ಪ್ರಪಂಚಕ್ಕೆ ಸಲ್ಲುವ ಮಾನವೀಯ ಗುಣಗಳನ್ನು ನೀಡಿದರು, ಸಮಾನತೆ ಪ್ರೀತಿ, ದೀನ ದುರ್ಬಲರ ಜೊತೆ ಪ್ರೀತಿಯನ್ನು ಹಂಚಿಕೊಂಡಾಗ ಕ್ರಿಸ್ಮಸ್ ಆಚರಣೆಗೆ ಅರ್ಥ ಹಾಗೂ ನೈಜ ಸಂದೇಶ ಎಂದು ಹೇಳಿ ಎಲ್ಲರಿಗೂ ಕ್ರಿಸ್ಮಸ್ ಶುಭಾಶಯ ಕೋರಿದರು. ಶಿರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಾರ್ತಿಕೇಯನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕರುಗಳಾದ ಜಯಪ್ರಕಾಶ್, ಮೇಹಿಜಾರ್ಜ್, ವಿದ್ಯಾರ್ಥಿ ನಾಯಕರುಗಳಾದ ರೋಶನ್, ಸೆಲ್ವಿನ್ ಮ್ಯಾಥ್ಯೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಶ್ರೀಧರ ಗೌಡ, ಆಂಗ್ಲಮಾಧ್ಯಮ ವಿಭಾಗದ ಮುಖ್ಯಶಿಕ್ಷಕಿ ಯಶೋಧರ ವರದಿ ವಾಚಿಸಿದರು. ಸಂಯೋಜಕರಾದ ರೆ.ಫಾ ಜಿಜನ್ ಅಬ್ರಹಾಂ ಸ್ವಾಗತಿಸಿದರು. ಶಾಲಾ ಆಡಳಿತಾಧಿಕಾರಿ ಜಾನ್.ಕೆ ವಂದಿಸಿದರು. ಶಿಕ್ಷಕಿ ನಯನ ಹಾಗೂ ಎಲಿಝಬೆತ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಕ್ರಿಸ್ಮಸ್ ಸಂದೇಶ ಸಾರುವ ನೃತ್ಯ ಪ್ರದರ್ಶನ ನಡೆಯಿತು.