ಈಚರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 6 ವರ್ಷದ ಮಗು ಮೃತಪಟ್ಟಿದ್ದು, ತಂದೆ- ತಾಯಿ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಶನಿವಾರ ಸಂಭವಿಸಿದೆ.
ಮೃತ ಬಾಲಕನನ್ನು ಬೆಳ್ತಂಗಡಿ ತಾಲೂಕಿನ ನಾವೂರು ಸಮೀಪದ ಮುರ ನಿವಾಸಿ ಅಬ್ದುಲ್ ಸಲೀಂ ಅವರ ಹಿರಿಯ ಪುತ್ರ ಶಾಝಿನ್ (6) ಎಂದು ಹೆಸರಿಸಲಾಗಿದೆ. ಸಲೀಂ ಅವರು ತನ್ನ ಪತ್ನಿ- ಮಕ್ಕಳೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಗಡಿಯಾರ ಎಂಬಲ್ಲಿ ಈಚರ್ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಬೈಕಿನಲ್ಲಿದ್ದ 6 ವರ್ಷದ ಮಗು ಶಾಝಿನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಗಾಯಗೊಂಡ ಅಬ್ದುಲ್ ಸಲೀಂ, ಅವರ ಪತ್ನಿ ಹಾಗೂ ಇನ್ನಿಬ್ಬರು ಮಕ್ಕಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.