Hyderabad | ಪತ್ನಿಯನ್ನು ಹತ್ಯೆಗೈದು, ಕುಕ್ಕರ್‌ನಲ್ಲಿ ಬೇಯಿಸಿ ಕೆರೆಗೆ ಎಸೆದ ಮಾಜಿ ಸೈನಿಕ

ಶೇರ್ ಮಾಡಿ

ಕೌಟುಂಬಿಕ ಕಲಹ (Family Feud) ಹಿನ್ನೆಲೆ ಮಾಜಿ ಸೈನಿಕ ತನ್ನ ಪತ್ನಿಯನ್ನು ಹತ್ಯೆಗೈದು, ಮೃತದೇಹವನ್ನು ತುಂಡುತುಂಡಾಗಿ ಕತ್ತರಿಸಿದ ನಂತರ ಕುಕ್ಕರ್‌ನಲ್ಲಿ ಬೇಯಿಸಿ ಕೆರೆಗೆ ಎಸೆದ ಘಟನೆ ಹೈದರಾಬಾದ್‌ನ ಮೀರಪೇಟೆಯಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಮಾಜಿ ಸೈನಿಕ ಗುರುಮೂರ್ತಿಯನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮೂಲದ ಗುರುಮೂರ್ತಿ(45) ಸ್ವಲ್ಪ ಕಾಲ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಪ್ರಸ್ತುತ ಕಾಂಚನ್‌ಬಾಗ್‌ನಲ್ಲಿ ಡಿಆರ್‌ಡಿಒದಲ್ಲಿ ಹೊರಗುತ್ತಿಗೆ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಜನವರಿ 18ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೀರಪೇಟೆಯ ನ್ಯೂ ವೆಂಕಟೇಶ್ವರ ನಗರ ಕಾಲೋನಿಯಲ್ಲಿ ಗುರುಮೂರ್ತಿ ಪತ್ನಿ ವೆಂಕಟ ಮಾಧವಿ(35) ಮತ್ತು ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ಹಲವು ದಿನಗಳಿಂದ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆ ಗುರುಮೂರ್ತಿ ಪತ್ನಿಯನ್ನು ಹತ್ಯೆಗೈದು ಬಳಿಕ ಮೃತದೇಹವನ್ನು ತುಂಡುತುಂಡಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿ ಕೆರೆಗೆ ಎಸೆದಿದ್ದಾನೆ.

ಹತ್ಯೆಯ ಬಳಿಕ ಗುರುಮೂರ್ತಿ ತನ್ನ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ಸಂಬಂಧಿಕರಿಗೆ ತಿಳಿಸಿದ್ದ. ಅಲ್ಲದೇ ಮೀರಪೇಟೆ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾನೆ. ದೂರು ದಾಖಲಿಸುವ ಸಲುವಾಗಿ ತನ್ನ ಅತ್ತೆ ಮಾವನೊಂದಿಗೆ ಪೊಲೀಸ್ ಠಾಣೆಗೆ ತೆರಳಿದ ಗುರುಮೂರ್ತಿ, ತನ್ನ ಹೆಂಡತಿ ಎಲ್ಲಿದ್ದಾಳೆಂದು ತಿಳಿದಿಲ್ಲ ಎಂಬಂತೆ ನಟಿಸಿದ್ದ. ಇಷ್ಟುಮಾತ್ರವಲ್ಲದೇ ಆಕೆಯನ್ನು ಹುಡುಕುವಲ್ಲಿ ಪೊಲೀಸರಿಗೆ ಬೆಂಬಲ ಕೂಡ ನೀಡಿದ್ದ.

ಆದರೆ ಪೊಲೀಸರು ಅನುಮಾನದ ಮೇಲೆ ಗುರುಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ. ಮೀರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

  •  

Leave a Reply

error: Content is protected !!