
ನೆಲ್ಯಾಡಿ: ನವೀಕರಣ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಫೆ.9ರಂದು ಬೆಳಿಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿ ದೇವರ ದರ್ಶನ ಪಡೆದರು.

ಹೆಗ್ಗಡೆಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ಗೌರಮ್ಮ ಶಬರಾಯ ಸಭಾಭವನದ ಎಲಿಕ್ಕಳ ಕೃಷ್ಣ ಶಬರಾಯ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಎಲ್ಲಾ ಜಾತಿ, ಧರ್ಮ, ಪಕ್ಷದವರು ಒಂದು ಸೇರುವ ಜಾಗ ದೇವಸ್ಥಾನವಾಗಿದೆ. ಹಿಂದೆ ನ್ಯಾಯತೀರ್ಮಾನಗಳು ಎಲ್ಲಾ ದೇವಸ್ಥಾನ, ದೇವರ ಸನ್ನಿದ್ಧಿಯಲ್ಲಿ ನಡೆಯುತಿತ್ತು. ದೇವಸ್ಥಾನ ಅತ್ಯಂತ ಪವಿತ್ರ ಸ್ಥಾನವಾಗಿದೆ. ಕ್ಷೇತ್ರದ ರಕ್ಷಣೆ ಮಾಡುವುದು ಭಕ್ತರ ಧರ್ಮವಾಗಿದೆ. ಧರ್ಮವಿದ್ದಲ್ಲಿ ದೇವರ ನೆಲೆ ಇರುತ್ತದೆ ಎಂದು ಹೇಳಿದರು. ದೇವರಿಗೆ ಶಕ್ತಿ ನೀಡುವ ಕೆಲಸ ತಂತ್ರಿಗಳಿಂದ ನಡೆಯುತ್ತದೆ. ದಾನ-ಧರ್ಮ ಮಾಡುವ ಮೂಲಕ ಕ್ಷೇತ್ರದ ಪಾವಿತ್ರ್ಯತೆಯನ್ನು ಹೆಚ್ಚಿಸುವಲ್ಲಿ ಭಕ್ತರು ಶ್ರಮವಹಿಸಬೇಕೆಂದು ಹೇಳಿದರು.

ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಜನಜಾಗೃತಿ ವೇದಿಕೆ ದ.ಕ.ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ, ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಶಿವಾನಂದ ಕಾರಂತ್ ಕಾಂಚನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ| ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳ ಗೌರವಾರ್ಪಣೆ ಸಲ್ಲಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಂದ ಹಾಗೂ ಜನಜಾಗೃತಿ ವೇದಿಕೆ, ಶೌರ್ಯವಿಪತ್ತು ತಂಡದ ಸದಸ್ಯರಿಂದ ಗೌರವಾರ್ಪಣೆ ನಡೆಯಿತು.
ವೀಣಾರಾಮಕೃಷ್ಣ ಭಟ್, ವೈಶಾಲ್ಯ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಜಿತ್‍ಕುಮಾರ್ ಪಾಲೇರಿ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ಜನಾರ್ದನ ಗೌಡ ಬರಮೇಲು ಕಾರ್ಯಕ್ರಮ ನಿರೂಪಿಸಿದರು.





