ಸರಕಾರಿ ಶಾಲಾ ಮಕ್ಕಳ ಪಾಲಿಗೆ ಕಲಿಕೆಯೆ ಹಬ್ಬ || ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬ ವಿಶಿಷ್ಟ ಕಾರ್ಯಕ್ರಮ ಜಾರಿ

ಶೇರ್ ಮಾಡಿ

ನೆಲ್ಯಾಡಿ: ಕಲಿತ ಪಾಠಗಳನ್ನೇ ವಿಭಿನ್ನವಾಗಿ ಸ್ಪರ್ಧಾತ್ಮಕ ಚಟುವಟಿಕೆಗಳ ಮೂಲಕ ತೆರೆದಿಟ್ಟರೆ, ಮಕ್ಕಳಿಗೆ ಕಲಿಕೆಯೇ ಹಬ್ಬವಾಗುತ್ತದೆ ಎಂಬ ನಿಟ್ಟನಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಕಲಿಕಾ ಹಬ್ಬ ನಡೆಸಲಾಗುತ್ತಿದೆ.

1ರಿಂದ 5ನೇ ತರಗತಿಯವರೆಗಿನ ಸರಕಾರಿ ಶಾಲಾ ಮಕ್ಕಳಿಗೆ ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬವನ್ನು ಫೆಬ್ರುವರಿ ತಿಂಗಳಲ್ಲಿ ನಡೆಸಲಾಗುತ್ತಿದೆ. ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದಡಿ 2013-14ನೇ ಶೈಕ್ಷಣಿಕ ಸಾಲಿನಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳ `ಕಲಿಕೋತ್ಸವ’ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತರಲಾಗಿತ್ತು. 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಇದರಡಿಯಲ್ಲಿ ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಕೋವಿಡ್ ಕಾಲಘಟ್ಟದಲ್ಲಿ ಇಂತಹ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಕೋವಿಡ್ ಕಲಿಕಾ ಕೊರತೆ ಸರಿದೂಗಿಸಲು 2022- 23ನೇ ಸಾಲಿನಲ್ಲಿ ಕಲಿಕಾ ಹಬ್ಬ ಜಾರಿಗೊಳಿಸಲಾಯಿತು. ಆಗ 4ರಿಂದ 9ನೇ ತರಗತಿ ಮಕ್ಕಳು ಭಾಗವಹಿಸಿದ್ದರು. ಈ ಬಾರಿ ಕಲಿಕಾ ಹಬ್ಬದಲ್ಲಿ 1ರಿಂದ 5ನೇ ತರಗತಿಯವರೆಗಿನ ಮಕ್ಕಳು ಭಾಗವಹಿಸುತ್ತಿದ್ದಾರೆ.

ಕ್ಲಸ್ಟರ್ ಮಟ್ಟದಲ್ಲಿ:
ಪ್ರತೀ ಕ್ಲಸ್ಟರ್ ಮಟ್ಟದಲ್ಲಿ ಆಯಾ ವ್ಯಾಪ್ತಿಯು ಸರಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಚಟುವಟಿಕೆ ನಡೆಸಲಾಗುತ್ತದೆ. ಇದಕ್ಕಾಗಿ ಕಲಿಕಾ ಮತ್ತು ಸ್ಟೇಷನರಿ ಸಾಮಗ್ರಿಗಳನ್ನು ನೀಡಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ.

ಏನೇನು ಚಟುವಟಿಕೆಗಳು?
ಗಟ್ಟಿ ಓದುವುದು, ಕಥೆ ಹೇಳುವುದು, ಕೈಬರಹ ಮತ್ತು ಕ್ಯಾಲಿಗ್ರಫಿ ಪ್ರಸ್ತುತ ಪಡಿಸುವುದು, ಸಂತೋಷದಾಯಕ ಗಣಿತ, ಟ್ರಷರ್ ಹಂಟ್, ಮೆಮೊರಿ ಪರೀಕ್ಷೆ, ರಸಪ್ರಶ್ನೆ, ಸಣ್ಣ ಸಣ್ಣ ಕಥೆ ಕಟ್ಟುವುದು ಇತ್ಯಾದಿ ಚಟುವಟಿಕೆ ನಡೆಸಲಾಗುತ್ತದೆ. ಈ ಎಲ್ಲ ಚಟುವಟಿಕೆಗಳು ಮಕ್ಕಳಲ್ಲಿ ಕುತೂಹಲ ಸೃಷ್ಟಿಸಲು ಸಾಧ್ಯವಾಗುತ್ತದೆ. ನೆನಪಿನ ಶಕ್ತಿ ವೃದ್ಧಿಸುತ್ತದೆ, ಹಿಂಜರಿಕೆ ದೂರ ಮಾಡುತ್ತದೆ. ನೈತಿಕ ಹಾಗೂ ಕಾಲ್ಪನಿಕ ಕಥೆಗಳನ್ನು ಸೃಜಿಸುವುದರಿಂದ ಮಕ್ಕಳ ಕಲ್ಪನಾ ಶಕ್ತಿ ಬೆಳವಣಿಗೆಗೆ ಅವಕಾಶ ನೀಡಿದಂತಾಗುತ್ತದೆ. ಮೋಜಿನ ಗಣಿತದ ಆಟಗಳ ಮೂಲಕ ಕಬ್ಬಿಣದ ಕಡಲೆ ಎಂಬ ಪೂರ್ವಾಗ್ರಹಕ್ಕೆ ಒಳಗಾದ ಗಣಿತ ಕಲಿಕೆಯನ್ನು ಸಂತಸದಾಯಕವಾಗಿಸುತ್ತದೆ. ಕ್ರಿಯಾಶೀಲತೆ ಗುರುತಿಸಲು ಟ್ರಷರ್ ಹಂಟ್ ಮತ್ತು ಮೆಮೊರಿ ಪರೀಕ್ಷೆ ಆಟಗಳಿವೆ.

  •  

Leave a Reply

error: Content is protected !!