

ಕಡಬ: ಯೂತ್ ಫ್ರೆಂಡ್ಸ್ ಕೊರುಂದೂರು ಇದರ ವತಿಯಿಂದ ಕೇಂದ್ರ ಸರ್ಕಾರದ ನೂತನ ವಕ್ಫ್ ಕಾಯ್ದೆಯನ್ನು ವಿರೋಧಿಸಿ ಕಡಬದ ಕೊರುಂದೂರಿನಲ್ಲಿ ಮೊಂಬತ್ತಿ ಹಿಡಿದು ಬಹಿರಂಗ ಪೋಸ್ಟರ್ ಪ್ರದರ್ಶನ ಮತ್ತು ನೂತನ ಇಸ್ಲಾಮಿಕ್ ವಿರೋದಿ ವಕ್ಫ್ ಕಾಯ್ದೆಯ ಮಾಹಿತಿಯನ್ನು ನೀಡಲಾಯಿತು.

ಬಹು ಉಸ್ತಾದ್ ಮಹಮ್ಮದ್ ಮುಸ್ತಫಾ ಇರ್ಫಾನಿ ಮಾತನಾಡಿ ಇಂದು ಸಮುದಾಯ ಆಪತ್ತಿನಲ್ಲಿದೆ. ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ. ಕೇಂದ್ರ ಸರ್ಕಾರವು ಮುಸ್ಲಿಂ ಸಮುದಾಯದ ವಕ್ಫ್ ಮಂಡಳಿಯ ಹಿಂದಿನ ನಿಯಮಗಳನ್ನು ಬದಲಾಯಿಸಿ ಮುಸ್ಲಿಂ ವಿರೋಧಿ ಕಾನೂನು ಮತ್ತು ನಿಯಮಗಳನ್ನು ಜಾರಿಗೆ ತರಲು ಹೊರಟಿದೆ. ಮುಸ್ಲಿಂ ಸಮುದಾಯದ ಮತ ಪಡೆದ ರಾಜಕೀಯ ನಾಯಕರು ಕೂಡ ಈ ಮುಸ್ಲಿಂ ಸಮುದಾಯದ ಆಪತ್ತಿನಲ್ಲಿ ಜೊತೆ ನಿಲ್ಲದೆ ದೂರ ಉಳಿದಿರುವುದು ವಿಪರ್ಯಸವೇ ಸರಿ. ವಕ್ಫ್ ಎನ್ನುವುದು ಮುಸ್ಲಿಂ ಸಮುದಾಯದ ಆಸ್ತಿ ಮತ್ತು ಹಕ್ಕು. ಅದನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ನೂತನ ವಕ್ಫ್ ಕಾಯ್ದೆಯನ್ನು ವಿರೋದಿಸಲು ಮತ್ತು ಅದನ್ನು ಜಾರಿಗೆ ಬರದಂತೆ ನೋಡಲು ಮುಸ್ಲಿಂ ಸಮುದಾಯದ ಯಾವುದೇ ತ್ಯಾಗ ಸಹಿಸಲು ಸಿದ್ದವಾಗಿ ನಿಂತಿದೆ. ಈ ಕೇಂದ್ರ ಸರ್ಕಾರದ ಅಜೆಂಡಾ ಯಾವುದೇ ಕಾರಣಕ್ಕೂ ನಡೆಯುವುದಿಲ್ಲ. ಮುಸ್ಲಿಂ ಸಮುದಾಯದ ಆಸ್ತಿಯ ಒಂದು ಇಂಚಿನಷ್ಟು ಜಾಗ ಕೂಡ ಬಿಟ್ಟುಕೊಡುವುದಿಲ್ಲ.ಈ ಸಮುದಾಯದ ಏಳಿಗೆಗಾಗಿ ಹಿಂದಿನ ತಲೆಮಾರಿನ ದಾನಿಗಳು ನೀಡಿದ ಸ್ವತ್ತು ಮುಟ್ಟುವ ಆಸೆಯನ್ನು ಕೇಂದ್ರ ಸರ್ಕಾರ ಹೊಂದಿದ್ದರೆ ಅದು ಕೇವಲ ಆಸೆಯಾಗಿ ಉಳಿಯಲಿದೆ. ಭಾರತದವೆಂಬ ಈ ಪುಣ್ಯ ಭೂಮಿಯಲ್ಲಿ ಸರ್ವ ಸಮುದಾಯಕ್ಕೂ ಅವರವರ ಹಕ್ಕಿನಂತೆ ಜೀವಿಸುವ ಅಧಿಕಾರ ಇದೆ. ಮುಸ್ಲಿಂ ಸಮುದಾಯದ ಅಭಿವೃದ್ಧಿ ಎಂದು ನಾಟಕವಾಡಿ ಮಾಡುತ್ತಿರುವ ಅಜೆಂಡಾಗಳು ಎಂದಿಗೂ ಜಾರಿಗೆ ಬರಲು ನಾವು ಬಿಡುವುದಿಲ್ಲ. ಸ್ವಾತಂತ್ರ್ಯಕ್ಕಾಗಿ ಜೀವ ಬಲಿದಾನ ನೀಡಿದ ಮುಸಲ್ಮಾನರ ತಲೆಮಾರಿನವರು ನಾವು ನಮ್ಮ ಸಮುದಾಯಕ್ಕೆ ಆಪತ್ತು ಬಂದರೆ ಕೇಂದ್ರ ಸರ್ಕಾರದ ವಿರುದ್ಧ ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೂ ನಾವು ತಯಾರಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಯೂತ್ ಫ್ರೆಂಡ್ಸ್ ನಾಯಕರಾದ ಜಮಾಲ್, ಸಿದ್ದೀಕ್ ಕೊರುಂದೂರು, ಅಫ್ನಾನ್, ಬಶೀರ್ ಕೊರುಂದೂರು, ಸುಹೈಲ್, ಅಬೂಬಕ್ಕರ್, ಇಸ್ಮಾಯಿಲ್, ಮುಹಮ್ಮದ್, ನಝೀರ್, ಮುಹಮ್ಮದ್ ಅಲಿ, ಕಬೀರ್, ಶಫಿಯುಲ್ಲಾ ಸೇರಿದಂತೆ ಹಲವಾರು ಯೂತ್ ಫ್ರೆಂಡ್ಸ್ ಮತ್ತು ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.






