

ಕೊಕ್ಕಡ: ದ.ಕ.ದಲ್ಲಿ ಹೆಚ್ಚಾಗಿ ದುರ್ಗಾಪರಮೇಶ್ವರಿಯ ಸಾನಿಧ್ಯವನ್ನು ನೋಡುತ್ತೇವೆ. ದೇವರ ಸೇವೆಗೆ ಮನಸ್ಸು ಇದ್ದರೂ ಅವಕಾಶ ಸಿಗುವುದು ಕಡಿಮೆ. ನಮ್ಮ ಮೇಲೆ ದೇವರ ಕೃಪಾಕಟಾಕ್ಷ ಇದ್ದರೆ ಮಾತ್ರ ಸಾಧ್ಯ. ಭಗವಂತನ ಸೇವೆ ನಮ್ಮ ಶ್ರೇಯಸ್ಸಿಗೆ ಕಾರಣವಾಗುತ್ತದೆ ನಾವು ಮಾಡಿದ ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ಹಾಗೂ ದೇವರ ಕಾರ್ಯಕ್ಕೆ ಉಪಯೋಗಿಸಿದರೆ ನಮ್ಮ ಸಂಪತ್ತು ಸುರಕ್ಷಿತವಾಗಿರುತ್ತದೆ ಎಂದು ಸುಬ್ರಹ್ಮಣ್ಯ ಮಠದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಶ್ರೀ ಕ್ಷೇತ್ರ ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.26 ರಿಂದ ಪ್ರಾರಂಭಗೊಂಡು ಫೆ.28ರವರೆಗೆ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಫೆಬ್ರವರಿ 26ರಂದು ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಮಾತನಾಡಿದರು

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ನೂತನ ಸಭಾ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ರೂ.5 ಲಕ್ಷ ನೀಡಿ ಮಾತನಾಡಿದ ಅವರು ಎಲ್ಲರನ್ನೂ ಒಟ್ಟಾಗಿ ಸೇರಿಸಿ ದೇವರ ಸೇವೆ ಮಾಡಬೇಕು. ಸನಾತನ ಪರಂಪರೆಯಲ್ಲಿ ನಮ್ಮತನವನ್ನು ಮರೆಯಬಾರದು ಎಂದು ಹೇಳಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಶ್ರೀಮತಿ ವಿನಯಾ ಮತ್ತು ವಾಮನ ತಾಮ್ಹನ್ ಕರ್ ಅರಸಿನಮಕ್ಕಿ ಹಾಗೂ ದಿವ್ಯ ಮತ್ತು ದಿವಾಕರ ಗುಡ್ಡೆತೋಟ ಇವರಿಂದ ಶ್ರೀದೇವಿಗೆ ಆಭರಣ ಸಹಿತ ಪಲ್ಲಕ್ಕಿ ಸಮರ್ಪಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹಾಗೂ ಕೆ.ಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ ಅವರನ್ನು ಸ್ವಾಮೀಜಿ ಅವರು ಶಾಲು ಹೊದಿಸಿ ಗೌರವಿಸಿದರು.
ಬೆಳಗ್ಗೆ ಗಣ ಹೋಮ, ಸ್ವಸ್ತಿ ಪುಣ್ಯಾಹ ವಾಚನ, ಬಿಂಬ ಶುದ್ದಿ, ಕಲಶ ಪೂಜೆ, ಚಂಡಿಕಾ ಹೋಮ ಬಳಿಕ ಹೊರ ಕಾಣಿಕೆ ಸಮರ್ಪಣೆ, ಚಂಡಿಕಾ ಹೋಮ ಪೂರ್ಣಾಹುತಿ, ಸುವಾಸಿನಿ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಪಲ್ಲಕ್ಕಿ ಉತ್ಸವ, ಕಟ್ಟೆ ಪೂಜೆ, ಅಷ್ಟ ಸೇವೆ, ಅಶ್ವತ ಕಟ್ಟೆ ಉತ್ಸವ ಹಾಗೂ ಪೆರ್ಲ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕಲಾಭಾರತಿ ಪೆರ್ಲ ತಂಡದಿಂದ ತುಳು ಸಾಂಸಾರಿಕ ನಾಟಕ ತುಡರ್ ಪೆರ್ಲ ತ್ಯಾಂಪಣ್ಣ ಶೆಟ್ಟಿಗಾರ್ ರಚಿಸಿ ನಿರ್ದೇಶನ ಮಾಡಿದ “ಕಣ್ಣೀರು ತೆಲಿನಗ” ನಾಟಕ ಪ್ರದರ್ಶನಗೊಂಡಿತು.





