ಕೊಕ್ಕಡ 108 ಆ್ಯಂಬುಲೆನ್ಸ್ ದುರಸ್ತಿ: ಸಾರ್ವಜನಿಕ ಸೇವೆಗೆ ಮತ್ತೆ ಲಭ್ಯ

ಶೇರ್ ಮಾಡಿ

ಕೊಕ್ಕಡ :ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 108 ಆ್ಯಂಬುಲೆನ್ಸ್ ಕಳೆದ ಒಂದು ತಿಂಗಳಿನಿಂದ ಸೇವೆಗೆ ಅಯೋಗ್ಯವಾಗಿತ್ತು. ಅದರ ನಾಲ್ಕು ಚಕ್ರಗಳು ಪಂಚರ್ ಆಗಿದ್ದರಿಂದ ತುರ್ತು ಸೇವೆಗಳು ಸ್ಥಗಿತಗೊಂಡಿದ್ದು, ಹೋಬಳಿಯ ಹಲವಾರು ಗ್ರಾಮಗಳ ಜನರು ತೊಂದರೆಗೆ ಒಳಗಾದರು.

ಕೊಕ್ಕಡ ಹೋಬಳಿ ವ್ಯಾಪ್ತಿಯ ಶಿಶಿಲ, ಶಿಬಾಜೆ, ಪಟ್ರಮೆ, ಅರಸಿನಮಕ್ಕಿ ಸೇರಿದಂತೆ ವಿವಿಧ ಗ್ರಾಮಗಳ ಜನರಿಗೆ 108 ಆ್ಯಂಬುಲೆನ್ಸ್ ಅಗತ್ಯ ಸೇವೆಯಾಗಿತ್ತು. ಆದರೆ ಟಯರ್‌ಗಳ ನಿರ್ವಹಣಾ ಸಮಸ್ಯೆಯಿಂದಾಗಿ ಆ್ಯಂಬುಲೆನ್ಸ್ ನಿಷ್ಕ್ರಿಯವಾಗಿದ್ದುದರಿಂದ ತುರ್ತು ವೈದ್ಯಕೀಯ ಪರಿಸ್ಥಿತಿಯಲ್ಲಿ ರೋಗಿಗಳನ್ನು ದೂರದ ಆಸ್ಪತ್ರೆಗೆ ಸಾಗಿಸಲು ತೊಂದರೆ ಉಂಟಾಯಿತು.

ಆಸ್ಪತ್ರೆಯ ವೈದ್ಯಾಧಿಕಾರಿಯವರು ಎರಡು ಬಾರಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಈ ಕುರಿತಂತೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ, ಕೊಕ್ಕಡ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಆಲಂಬಿಲ ಅವರು ಈ ಸಮಸ್ಯೆಯನ್ನು ಮಾಧ್ಯಮಗಳ ಗಮನಕ್ಕೆ ತಂದು, ಸಾರ್ವಜನಿಕರ ಪರವಾಗಿ ಸರಕಾರದ ಗಮನಸೆಳೆಯಲು ಪ್ರಯತ್ನಿಸಿದರು.

ಮಾಧ್ಯಮ ವರದಿ ಬಳಿಕ ತ್ವರಿತ ದುರಸ್ತಿ
ಈ ಕುರಿತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ “ಕೊಕ್ಕಡ 108 ಆಂಬ್ಯುಲೆನ್ಸ್ ಗೆ ಅನಾರೋಗ್ಯ – ಸವೆದು ಹೋದ ಟೈಯರ್ | ಸ್ಥಗಿತಗೊಂಡ ಸೇವೆ| ಸಿಬ್ಬಂದಿ ಬೇರೆಡೆಗೆ ನಿಯೋಜನೆ” ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾದ ಕೆಲವೇ ದಿನಗಳಲ್ಲಿ ಜಿವಿಕೆ ಸಂಸ್ಥೆ ತ್ವರಿತವಾಗಿ ಸ್ಪಂದಿಸಿ ಆ್ಯಂಬುಲೆನ್ಸ್‌ನ ಟಯರ್‌ಗಳನ್ನು ಬದಲಾಯಿಸಿ, ತಾಂತ್ರಿಕ ದುರಸ್ತಿ ಕಾರ್ಯಗಳನ್ನು ಮುಗಿಸಿದರು.

ಮಾ.8ರಿಂದ ಸೇವೆಗೆ ಲಭ್ಯ
ದುರಸ್ತಿ ಕಾರ್ಯ ಮುಗಿದ ನಂತರ, ಮಾ.8ರ ಬೆಳಿಗ್ಗೆ 6 ಗಂಟೆಯಿಂದ 108 ಆ್ಯಂಬುಲೆನ್ಸ್ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ.

ಸಾರ್ವಜನಿಕರು ಇದೀಗ ಆ್ಯಂಬುಲೆನ್ಸ್ ಸೇವೆ ಪುನಾರಂಭವಾದ ಹಿನ್ನೆಲೆ ತುರ್ತು ಚಿಕಿತ್ಸೆಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆ ಒದಗಲಿದೆ.

  •  

Leave a Reply

error: Content is protected !!