

ಕೊಕ್ಕಡ: ಕನ್ಯಾಡಿ ಸೇವಾಭಾರತಿ ಇದರ ನೇತೃತ್ವದಲ್ಲಿ, ಸಬಲಿನಿ ಯೋಜನೆಯಡಿ, ಅರಸಿನಮಕ್ಕಿ ಗ್ರಾಮ ಪಂಚಾಯತಿ ಮತ್ತು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ಉಚಿತ 31ನೇ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ ಮಾ.9 ರಂದು ಹತ್ಯಡ್ಕ ಸಿ.ಎ. ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.

ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅರಸಿನಮಕ್ಕಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಗಾಯತ್ರಿ ಚಾಲನೆ ನೀಡಿ, ಭಾಗವಹಿಸಿದ ಮಹಿಳೆಯರಿಗೆ ಶುಭಹಾರೈಸಿದರು. ತಮ್ಮ ಉದ್ಬೋಧನೆಯಲ್ಲಿ ಮಹಿಳಾ ಸಬಲಿಕರಣದ ಮಹತ್ವವನ್ನು ಉಲ್ಲೇಖಿಸಿ, ಈ ತರಬೇತಿ ಶಿಬಿರವು ಸ್ವ-ಉದ್ಯೋಗದ ಕಡೆಗೆ ಮಹತ್ವದ ಹೆಜ್ಜೆಯಾಗಿದೆ ಎಂದರು.

ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷೆ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘದ ಸಿಇಒ ಶ್ರೀಮತಿ ಸ್ವರ್ಣಗೌರಿ ಮಾತನಾಡಿ, ಟೈಲರಿಂಗ್ ಕಲಿಕೆ ಅನೇಕ ಉದ್ಯೋಗದ ಅವಕಾಶಗಳನ್ನು ಒದಗಿಸಬಲ್ಲದು. “ದೀಪ ಜ್ಯೋತಿ ಹೇಗೆ ಬೆಳಗುತ್ತದೋ, ಹಾಗೆಯೇ ನೀವು ಈ ವಿದ್ಯೆಯನ್ನು ಉಪಯೋಗಿಸಿ ಸಮಾಜದಲ್ಲಿ ಬೆಳಗಬೇಕು” ಎಂದು ಶುಭ ಹಾರೈಸಿದರು.
ಈ ಸಮಾರಂಭದಲ್ಲಿ ಅರಸಿನಮಕ್ಕಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುಧೀರ್ ಕುಮಾರ್, ಕನ್ಯಾಡಿ ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಶಾಂತ ಪಿ ಶೆಟ್ಟಿ, ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದ ಮಹಿಳಾ ಕಾರ್ಯದರ್ಶಿ ಶ್ರೀಮತಿ ನೀತಾ ರಾಜೇಶ್ ಆಚಾರ್ಯ, ಹಿರಿಯ ಟೈಲರಿಂಗ್ ತರಬೇತುದಾರ ಶ್ರೀಮತಿ ಶಕುಂತಳಾ ಎಂ. ಆಚಾರ್ಯ ಮತ್ತು ತರಬೇತುದಾರ ಶ್ರೀಮತಿ ರೇಷ್ಮಾ ಜಯಪ್ರಸಾದ್ ಶೆಟ್ಟಿ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 31 ಮಂದಿ ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದು, ಮಹಿಳಾ ಸಬಲಿಕರಣದತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಕಾರ್ಯಕ್ರಮದಲ್ಲಿ ಶ್ರೀಮತಿ ಧನ್ಯ ಸ್ವಾಗತಿಸಿ, ಸೇವಾಭಾರತಿಯ ಡಾಕ್ಯುಮೆಂಟೇಶನ್, ಮೋನಿಟರಿಂಗ್ ಮತ್ತು ಇವಾಲ್ಯೂವೇಶನ್ ಕಾರ್ಡಿನೇಟರ್ ಸುಮ ನಿರೂಪಿಸಿದರು. ಶ್ರೀಮತಿ ಭಾರತಿ ವಂದಿಸಿದರು.
ಈ ತರಬೇತಿ ಶಿಬಿರವು ಸ್ಥಳೀಯ ಮಹಿಳೆಯರಿಗೆ ಜೀವನೋಪಾಯದ ಹೊಸ ಅವಕಾಶಗಳನ್ನು ನೀಡುವಲ್ಲಿ ಮಹತ್ತರ ಪಾತ್ರ ವಹಿಸಲಿದೆ.





