

ನೆಲ್ಯಾಡಿ: ನೆಲ್ಯಾಡಿ ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ಸಿಲ್ವರ್ ಜುಬಿಲಿ ಮೆಮೋರಿಯಲ್ ಹಾಲ್‌ನಲ್ಲಿ ಶನಿವಾರ ಯುಕೆಜಿ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭ ವಿಜೃಂಭಣೆಯಿಂದ ನಡೆಯಿತು.


ಕಾರ್ಯಕ್ರಮವನ್ನು ಕೊಕ್ಕಡ ಸೈಂಟ್ ಜಾನ್ ಬ್ಯಾಪ್ಟಿಸ್ಟ್ ಚರ್ಚ್‌ನ ಧರ್ಮಗುರು ರೆ.ಫಾ. ಅನಿಲ್ ಪ್ರಕಾಶ್ ಡಿಸೋಜಾ ಉದ್ಘಾಟಿಸಿ, “ಎಲ್‌ಕೆಜಿ ಮತ್ತು ಯುಕೆಜಿ ಹಂತವು ಮಕ್ಕಳ ಶಿಕ್ಷಣದ ಮೊದಲ ಹೆಜ್ಜೆಯಾಗಿದ್ದು, ಈ ಹಂತದಲ್ಲಿ ಶಿಕ್ಷಕರು ಹಾಗೂ ಪೋಷಕರು ವಿಶೇಷ ಗಮನ ನೀಡಬೇಕು. ಪಾಠವನ್ನು ಆಟದ ಮೂಲಕ ಕಲಿಸಿದರೆ ಮಕ್ಕಳಿಗೆ ಸುಗಮವಾಗುತ್ತದೆ. ಅವರು ಕೇಳುವ ಪ್ರತಿಯೊಂದು ಪ್ರಶ್ನೆಗೆ ಸಹನಶೀಲ ಹಾಗೂ ಸಮಾಧಾನಕರ ಉತ್ತರ ನೀಡಿದರೆ, ಅವರ ಭವಿಷ್ಯದ ಗತಿಗೆ ಸಹಕಾರಿಯಾಗುತ್ತದೆ” ಎಂದು ಹೇಳಿದರು.

ಕಾಲೇಜಿನ ಸಂಚಾಲಕರಾದ ರೆ.ಫಾ. ಜೈಸನ್ ಸೈಮನ್ ಓಐಸಿ ಮಾತನಾಡಿ, ಸಂಸ್ಥೆಯು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅನುಕೂಲವಾಗುವ ಎಲ್ಲಾ ಸೌಲಭ್ಯಗಳು ಈ ಸಂಸ್ಥೆಯಲ್ಲಿ ಲಭ್ಯವಿವೆ ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ರೆ.ಫಾ.ಡಾ.ವರ್ಗೀಸ್ ಕೈಪನಡ್ಕ ಮಾತನಾಡಿ, “ಕೆಲವು ಖಾಸಗಿ ಶಾಲೆಗಳು ಉಚಿತ ಶಿಕ್ಷಣ ನೀಡುವ ಬಗ್ಗೆ ಭಾರೀ ಪ್ರಚಾರ ಮಾಡುತ್ತವೆ. ಆದರೆ ಗುಣಮಟ್ಟದ ಶಿಕ್ಷಣವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವುದೇ ಕಾರಣಕ್ಕೂ ನೀಡಲು ಸಾಧ್ಯವಿಲ್ಲ. ಪೋಷಕರು ಈ ರೀತಿಯ ಪ್ರಚಾರಕ್ಕೆ ಮಾರುಹೋಗದೆ ತಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಉತ್ತಮ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಬೇಕು” ಎಂದು ಕರೆ ನೀಡಿದರು. “ನಮ್ಮ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ನುರಿತ, ಅನುಭವಿ ಶಿಕ್ಷಕರ ತಂಡವಿದೆ. ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ನಮ್ಮ ಸಂಸ್ಥೆ ಒದಗಿಸುತ್ತಿದೆ” ಎಂದರು.
ಬಳಿಕ, ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪುಟಾಣಿ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಹಾಜರಿದ್ದವರೆಲ್ಲರ ಮನಗೆದ್ದರು.
ಈ ಸಂದರ್ಭದಲ್ಲಿ ರೆ.ಫಾ.ಜೇಮ್ಸ್ ತೋಮಸ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಉಪಪ್ರಾಚಾರ್ಯ ಜೋಸ್ ಎಂ.ಜೆ, ಎಚ್ ಒ ಡಿ ಸುಶೀಲ್ ಕುಮಾರ್, ಪ್ರೌಢಶಾಲಾ ಮುಖ್ಯಶಿಕ್ಷಕ ಜಾರ್ಜ್ ಕೆ. ತೋಮಸ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಜೋಸ್ ಪ್ರಕಾಶ್, ಕೆಜಿ ವಿಭಾಗದ ಮುಖ್ಯಸ್ಥೆ ಗೆಸ್ಸಿ, ಡಿಕನ್ ಮರ್ವಿನ್ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅಭಿಸ್ಟ್ ಜೈನ್, ಕೆಲ್ಟನ್ ಶರ್ಲೊಕ್ ಡಿಸೋಜಾ ಮತ್ತು ಅಥಿತಿ ಜೆ.ಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸನ್ಮಾನ:
ಶಿಕ್ಷಕ-ರಕ್ಷಕ ಸಂಘದ ವತಿಯಿಂದ ಫಾದರ್ ಆಗಿ ದೀಕ್ಷೆ ಪಡೆದ 25 ವರ್ಷ ಪೂರೈಸಿದ ಕಾಲೇಜಿನ ಪ್ರಾಚಾರ್ಯ ರೆ.ಫಾ.ಡಾ. ವರ್ಗೀಸ್ ಕೈಪನಡ್ಕ ಅವರನ್ನು ಗೌರವಿಸಲಾಯಿತು. ಅವರ ನಿರಂತರ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು.





