



ಕೊಕ್ಕಡ: ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ಕುಟುಂಬದ ಜವಾಬ್ದಾರಿಯೊಂದಿಗೆ ಸಮಾಜದ ಎಲ್ಲಾ ರಂಗದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸಂಜೀವಿನಿಯು ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಮಹಿಳೆಯರ ಸರ್ವಾಂಗೀಣ ಬೆಳವಣಿಗೆಗೆ ಕಟಿಬದ್ಧವಾಗಿ ನಿಂತಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕರಾದ ಕೆ.ವಿ ಜಯರಾಮ್ ಎಂದರು.

ಅವರು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಜಿಲ್ಲಾ ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕ ದಕ್ಷಿಣ ಕನ್ನಡ, ತಾಲೂಕು ಅಭಿಯಾನ ನಿರ್ವಹಣಾ ಘಟಕ, ತಾಲೂಕು ಪಂಚಾಯತಿ ಬೆಳ್ತಂಗಡಿ, ನೇತ್ರಾವತಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ, ಬೆಳ್ತಂಗಡಿ, ಸಂಗಮ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ, ಕೊಕ್ಕಡ ಗ್ರಾಮ ಪಂಚಾಯತಿ ಇವುಗಳ ಜಂಟಿ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಂಜೀವಿನಿ ಸಂತೆ ಮಾ.15ರಂದು ಕೊಕ್ಕಡದ ಸೌತಡ್ಕ ಶ್ರೀ ಮಹಾ ಗಣಪತಿ ದೇವಸ್ಥಾನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಜೀವಿನಿ ಸಂತೆ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಎನ್. ಬೆಳ್ತಂಗಡಿ ತಾಲೂಕಿನಲ್ಲಿ ಸ್ವಚ್ಛತೆ, ಕುಡಿಯುವ ನೀರು, ಲಿಂಗತ್ವ ವೇದಿಕೆ, ಘನತ್ಯಾಜ್ಯ ನಿರ್ವಹಣೆ ಮುಂತಾದ ಎಲ್ಲಕಾರ್ಯಕ್ಷೇತ್ರದಲ್ಲೂ ಸಂಜೀವಿನಿ ಸದಸ್ಯರ ತೊಡಗಿಸಿಕೊಳ್ಳುವಿಕೆ ಶ್ಲಾಘನೀಯ ಎಂದು ಹೇಳಿದ ಅವರು ಆಯೋಜನೆಗೊಂಡಿದ್ದ ಸಂಜೀವಿನಿ ಸಂತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನೇತ್ರಾವತಿ ತಾಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷೆ ಮಧುರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೊಕ್ಕಡ ಗ್ರಾಮ ಪಂಚಾಯತಿ ಅಧ್ಯಕ್ಷೆ ಬೇಬಿ, ನೇತ್ರಾವತಿ ಸಂಜೀವಿನಿ ತಾಲೂಕ ಮಟ್ಟದ ಒಕ್ಕೂಟದ ಕಾರ್ಯದರ್ಶಿ ಗಿರಿಜಾ ಕೆದಿಲಾಯ, ಸಂಗಮ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಅಧ್ಯಕ್ಷೆ ಕುಸುಮ, ಸೌತಡ್ಕ ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಪ್ರಭಾರ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ನಿತೀಶ್ ಹಾಗೂ ಕೊಕ್ಕಡ ಗ್ರಾಮ ಪಂಚಾಯತಿ ಅಭಿವೃದ್ಧಿ ದೀಪಕ್ ರಾಜ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತಾಲೂಕು ಅಭಿಯಾನ ನಿರ್ವಹಣಾ ಘಟಕದ ಎಲ್ಲಾ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು. ಶ್ರೀಕಲಾ ಪ್ರಾರ್ಥಿಸಿ, ಕೊಕ್ಕಡ ವಲಯ ಮೇಲ್ವಿಚಾರಕಿ ವೀಣಾಶ್ರೀ ಕೆ.ಕೆ ಸ್ವಾಗತಿಸಿ, ವೇಣೂರು ಎಂಬಿಕೆ ಸುಲತಾ ವಂದಿಸಿ, ಶಿಶಿಲ ಕೃಷಿ ಸಖಿ ವಸಂತಿ, ಶಿಬಾಜೆ ಎಲ್ಸಿಆರ್ಪಿ ಮಾಲತಿ, ಕಲ್ಮಂಜ ಎಂಬಿಕೆ ಪುಷ್ಪ ನಿರೂಪಿಸಿದರು. ವಲಯ ಮೇಲ್ವಿಚಾರಕರಾದ ಜಯಾನಂದ ಹಾಗೂ ಸ್ವಸ್ತಿಕ್ ಜೈನ್, ಟಿಎಂಐಎಸ್ ವಿನೋದ್ ಪ್ರಸಾದ್ ಸಹಕರಿಸಿದರು.





