

ಮೊಗ್ರು ಗ್ರಾಮದ ಮುಗೇರಡ್ಕ – ಅಲೆಕ್ಕಿಯ ಶ್ರೀ ರಾಮ ಸೇವಾ ಟ್ರಸ್ಟ್ (ರಿ.) ವತಿಯಿಂದ ಮಾ.27ರಂದು ಶಿಶುಮಂದಿರ ವಠಾರದಲ್ಲಿ ಪೋಷಕರ ಹಾಗೂ ಶಿಕ್ಷಕರ ಚಿಂತನಾ ಸಭೆ ನಡೆಯಿತು. ಸಭಾಧ್ಯಕ್ಷತೆಯನ್ನು ಉದಯ ಭಟ್ ವಹಿಸಿದರು.
ಅಲೆಕ್ಕಿ ಶ್ರೀರಾಮ ಸೇವಾ ಟ್ರಸ್ಟ್ (ರಿ.) ಅಧ್ಯಕ್ಷ ರಮೇಶ್ ಎನ್, ಸಂಚಾಲಕ ಅಶೋಕ್ ಎನ್, ಶಿಶುಮಂದಿರದ ಹಿರಿಯ ವಿದ್ಯಾರ್ಥಿಗಳು, ಪೋಷಕರು, ಮಾತೃ ಮಂಡಳಿ, ಮತ್ತು ಜೈ ಶ್ರೀರಾಮ್ ಮಹಿಳಾ ಸಂಘದ ಪದಾಧಿಕಾರಿಗಳು, ಸದಸ್ಯರು ಸಭೆಯಲ್ಲಿ ಭಾಗವಹಿಸಿದರು.

ಶಿಶುಮಂದಿರದಿಂದ ಮುಂದಿನ ಶೈಕ್ಷಣಿಕ ವರ್ಷಕ್ಕೆ ತೆರಳುವ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲಾಗಿದ್ದು, ಅವರ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸಲಾಯಿತು. ಪ್ರಸವಕ್ಕಾಗಿ ತೆರಳುತ್ತಿರುವ ಗೀತಾ ಮಾತಾಜಿ ಮತ್ತು ನವ್ಯ ಮಾತಾಜಿ ಅವರಿಗೆ ಸಮಿತಿಯವರು ಮತ್ತು ಮಾತೆಯರು ಬಾಗಿನ ನೀಡಿ ಶುಭಕೋರಿದರು.
ಸಭೆಯಲ್ಲಿ ಪೋಷಕರ ಮಹತ್ವವನ್ನು ವಿವರಿಸಿ, ಅವರಿಗೆ ಪುಷ್ಪಾರ್ಚನೆ ಮಾಡಲಾಯಿತು. ಶಿಶುಮಂದಿರದ ಅನ್ನದಾಸೋಹದಲ್ಲಿ ಸದಾ ಸಹಕರಿಸುತ್ತಿರುವ ದಾನಿಗಳು ಧರ್ಣಪ್ಪ ಗೌಡ ನಿರುಂಬುಡ, ಶ್ರೀಮತಿ ಸರಿತಾ ನಿರುಂಬುಡ, ಗಿರಿಧರ ಗೌಡ ನಿರುಂಬುಡ ಅವರಿಗೆ ಗೌರವ ಸಲ್ಲಿಸಲಾಯಿತು.
1ನೇ ತರಗತಿಯ ಮಕ್ಕಳ ಪೋಷಕರು ಶಿಶುಮಂದಿರಕ್ಕೆ ಗೋಡ್ರೇಜ್‌ನ್ನು ಕೊಡುಗೆಯಾಗಿ ನೀಡಿದರು. 2024-25ನೇ ಸಾಲಿನ ಮಾತೃ ಮಂಡಳಿಯ ಪದಾಧಿಕಾರಿಗಳು ದೀಪವನ್ನು ಉಡುಗೊರೆಯಾಗಿ ನೀಡಿದರು. ಸಭೆಯ ಅಂತ್ಯದಲ್ಲಿ ಎಲ್ಲರಿಗೂ ಉಪಾಹಾರ ಮತ್ತು ಸಿಹಿತಿಂಡಿ ವ್ಯವಸ್ಥೆ ಮಾಡಲಾಗಿತ್ತು.
ಪುಷ್ಪಲತಾ ಮಾತಾಜಿ ಸ್ವಾಗತಿಸಿ, ನಿರೂಪಿಸಿದರು. ಸಮಿತಿಯ ಸದಸ್ಯ ಭರತೇಶ್ ಪುಣ್ಕೆದಡಿ ಧನ್ಯವಾದ ಪ್ರಸ್ತಾಪಿಸಿದರು.





