

ಹಾಸನ: ಭಾರತೀಯ ಸಂಸ್ಕೃತಿಯಲ್ಲಿ ತುಂಬು ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ಮಾಡುವ ಪವಿತ್ರ ಸಂಪ್ರದಾಯವಿದೆ. ಆದರೆ ಈ ಸಂಪ್ರದಾಯವನ್ನು ಈಗ ಹಸುವಿಗೆ ಅನ್ವಯಿಸಿ ಅಪರೂಪದ ಕಾರ್ಯಕ್ರಮವನ್ನು ಹಾಸನದ ಉದ್ಯಮಿ ದಿನೇಶ್ ಅವರು ಆಯೋಜಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಬಿಡದಿ ಬಳಿಯ ಹಳ್ಳಿಯಿಂದ ತರಲಾಗಿದ್ದ ನಾಲ್ಕು ತಿಂಗಳ ಹಳ್ಳಿಕಾರ್ ತಳಿಯ ಹಸು ‘ಗೌರಿ’ಗೆ, ಲಕ್ಷಾಂತರ ರೂ. ಖರ್ಚು ಮಾಡಿ ಚನ್ನಪಟ್ಟಣದ ಗೋಮತಿ ಕಲ್ಯಾಣ ಮಂಟಪದಲ್ಲಿ ಸೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ಮಾಡಿದ್ದಾರೆ.
ಗರ್ಭಿಣಿ ಹಸುವಿಗೆ ಮದುವೆ ಮಂಟಪದಲ್ಲಿ ಸೀಮಂತ ಮಾಡಲಾಗಿದ್ದು, ಅಲಂಕಾರ ಮಾಡಿ, ಹೂವು ಮುಡಿಸಿ, ವೀಳ್ಯೆದೆಲೆ, ಹಸಿರು ಬಳೆ, ಅಕ್ಷತೆ, ಬೆಲ್ಲ, ಕೊಬ್ಬರಿ, ಹಣ್ಣುಗಳನ್ನಿಟ್ಟಿದ್ದು ಸಾಂಪ್ರದಾಯಿಕವಾಗಿ ಆರತಿ ಬೆಳಗಿಸಿ ಗೌರಿಯ ಸೀಮಂತ ಆಚರಿಸಲಾಯಿತು. ಐನೂರಕ್ಕೂ ಹೆಚ್ಚು ಮಂದಿ ಈ ಅಪರೂಪದ ಶಾಸ್ತ್ರದಲ್ಲಿ ಭಾಗವಹಿಸಿ ಭರ್ಜರಿ ಊಟ ಸವಿದರು.
ಸಾಕು ಪ್ರಾಣಿಗಳ ಪೋಷಣೆ, ವಿಶೇಷವಾಗಿ ದೇಸಿಯ ಹಳ್ಳಿಕಾರ್ ತಳಿಯ ಎತ್ತು ಹಾಗೂ ಹಸುಗಳನ್ನು ಸಾಕುವುದು ದಿನೇಶ್ ಅವರ ಹಂಬಲ. “ದೇಸಿಯ ತಳಿಗಳನ್ನು ಉಳಿಸುವುದು ನಮ್ಮ ಕರ್ತವ್ಯ. ಈ ರೀತಿಯ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತವೆ,” ಎನ್ನುತ್ತಾರೆ ದಿನೇಶ್.
ಹಳ್ಳಿಕಾರ್ ತಳಿ ಉಳಿಸಿ ಬೆಳೆಸಬೇಕೆಂಬ ಕೂಗಿನ ನಡುವೆ, ಹಸುವಿಗೆ ಸೀಮಂತ ಶಾಸ್ತ್ರ ನಡೆಸುವ ಮೂಲಕ ದೇಸಿಯ ಜಾನುವಾರುಗಳ ಮಹತ್ವವನ್ನು ಮತ್ತೊಮ್ಮೆ ಹತ್ತಿರದಿಂದ ಪರಿಚಯಿಸುವ ಕೆಲಸ ಮಾಡಲಾಗಿದೆ.









