ನೆಲ್ಯಾಡಿ: ಪುಚ್ಚೇರಿಯಲ್ಲಿ ನಂದಗೋಕುಲ ಕುಣಿತ ಭಜನಾ ತರಬೇತಿ ಸಮಾರೋಪ

ಶೇರ್ ಮಾಡಿ

ನೆಲ್ಯಾಡಿ: ಕಡಬ ತಾಲೂಕಿನ ಮಾದೇರಿಯಲ್ಲಿ ನಂದಗೋಕುಲ ಭಜನಾ ತಂಡದ ಆಶ್ರಯದಲ್ಲಿ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಡಬ ತಾಲೂಕು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ಕಡಬ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಾದೇರಿ ಇದರ ಸಹಯೋಗದಿಂದ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಾದೇರಿ ಶಬರಿಗಿರಿ ಮತ್ತು ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಭಕ್ತಿಭರಿತವಾಗಿ ಹಾಗೂ ಸಂಭ್ರಮದಿಂದ “ಕುಣಿತ ಭಜನಾ ತರಬೇತಿ ಸಮಾರೋಪ ಹಾಗೂ ಆಹ್ವಾನಿತ ತಂಡಗಳಿಂದ ಕುಣಿತ ಭಜನೆ” ಪುಚ್ಚೇರಿಯಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ನೆಲ್ಯಾಡಿ ಗ್ರಾಮ ಪಂಚಾಯಿತಿ ಸದಸ್ಯ ಆನಂದ ಪಿಲವೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, “ಭಜನೆ ಇರುವ ಸ್ಥಳದಲ್ಲಿ ವಿಭಜನೆಗೆ ಜಾಗವಿಲ್ಲ. ಇಂದಿನ ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳಲು ಸುಲಭವಾದ ಮಾರ್ಗವೆಂದರೆ ಭಜನೆ. ಭಜನೆಯ ಮೂಲಕ ವ್ಯಕ್ತಿಯ ಮನಸ್ಸು ಶುದ್ಧಿಯಾಗುತ್ತದೆ, ಸಮಾಜದಲ್ಲಿ ಧರ್ಮ, ನೈತಿಕತೆ ಮತ್ತು ಶ್ರದ್ಧೆಯ ಬೆಳವಣಿಗೆಗೆ ಇದು ನೆರವಾಗುತ್ತದೆ,” ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ ಯುವ ಜನತೆಯಲ್ಲಿ ಪವಿತ್ರ ಭಜನೆಯ ಬೀಜ ಬಿತ್ತಲು, ಹಾಗೂ ಸನಾತನ ಧರ್ಮದ ಸಂಸ್ಕೃತಿ, ಆಚರಣೆಗಳ ಬಗ್ಗೆ ತಿಳಿವಳಿಕೆಯನ್ನು ಒದಗಿಸಲು ಇದು ಉತ್ತಮ ವೇದಿಕೆಯಾಗಿರುವುದಾಗಿ ಅವರು ಅಭಿಪ್ರಾಯಪಟ್ಟರು. “ನಮ್ಮ ಪೂರ್ವಜರು ಧರ್ಮವನ್ನು ಮರೆಯದೆ ಬದುಕಿದವರು. ಅವರ ಜೀವನದಲ್ಲಿ ದೇವರನ್ನು ಕಂಡದ್ದು ವಸ್ತುಗಳಿಂದ ಅಲ್ಲ, ಆದರೆ ಮನಸ್ಸಿನ ಶುದ್ಧಿಯಿಂದ. ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನವಪೀಳಿಗೆಗೆ ಧರ್ಮದ ಮಹತ್ವವನ್ನು ಬೋಧಿಸಬೇಕಿದೆ,” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೀರ್ಥೇಶ್ವರ ಉರ್ಮಾನ್ ವಹಿಸಿ ಮಾತನಾಡಿ, ಭಜನಾ ಮಂದಿರವನ್ನು ಬೆಳಸಿ ಪೋಷಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಗೌರವಾಧ್ಯಕ್ಷರಾದ ಮಾದೇರಿ ಶಬರಿಗಿರಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಗುಮ್ಮಣ್ಣ ಗೌಡ ಪುಚ್ಚೇರಿ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷ ಸುಂದರ ಗೌಡ ಒಗ್ಗು, ಮಾದೇರಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಸೆಬಾಸ್ಟಿನ್ ಎಫ್.ಜೆ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಊರಿನ ಹಿರಿಯರಾದ ಗಣೇಶ್ ಗೌಡ ಪುಚ್ಚೇರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯಾಧ್ಯಕ್ಷ ಕುಶಾಲಪ್ಪ ಗೌಡ ಪಿ.ಎನ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮೋಹನ ಗೌಡ ಪುಚ್ಚೇರಿ, ನಂದಗೋಕುಲ ಭಜನಾ ಸಮಿತಿಯ ಅಧ್ಯಕ್ಷೆ ವಿಜಯ ಇಚ್ಚೂರು ಹಾಗೂ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಿರುಮಲೇಶ್ವರ, ಜನಾರ್ದನ ಗೌಡ ಮತ್ತು ಸುಂದರ ಗೌಡ ಒಗ್ಗು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ಕುಣಿತ ಭಜನಾ ಪ್ರದರ್ಶನವನ್ನು ತರಬೇತಿ ಪಡೆದ ವಿದ್ಯಾರ್ಥಿಗಳು ಹಾಗೂ ಆಹ್ವಾನಿತ ಭಜನಾ ತಂಡಗಳು ಮನಮೆಚ್ಚುವಂತೆ ನೀಡಿದವು.

ಕುಣಿತ ಭಜನಾ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಹಾಗೂ ಆಹ್ವಾನಿತ ಭಜನಾ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.

Nellyady

ತ್ರಿಷಾ ಮತ್ತು ಬಳಗದವರು ಪ್ರಾರ್ಥಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಲ್ಯಾಡಿ ವಲಯ ಮೇಲ್ವಿಚಾರಕರಾದ ಆನಂದ.ಡಿ ಸ್ವಾಗತಿಸಿದರು, ಭವ್ಯ ಕೊರಡೇಲು ವರದಿ ವಾಚಿಸಿದರು. ರವಿಪ್ರಸಾದ್ ಹಾಗೂ ಭವಿಷ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಲಕ್ಷ್ಮಣ ವಂದಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ಯೋಜನಾಧಿಕಾರಿ ಮೇದಪ್ಪ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಮಾದೇರಿ ನಂದಗೋಕುಲ ಭಜನಾ ಸಮಿತಿಯ ಸದಸ್ಯರು, ಮಾದೇರಿ ಕುಣಿತ ಭಜನಾ ಸಮಾರೋಪ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆಲ್ಯಾಡಿ ಮೇಲ್ವಿಚಾರಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಮಾದೇರಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

  •  

Leave a Reply

error: Content is protected !!