

ಮಂಗಳೂರು: ನಗರ ಹೊರವಲಯದ ಕಲ್ಲಾಪು ಬಳಿ ನಿರ್ಜನ ಪ್ರದೇಶದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿರುವ ಹೊರರಾಜ್ಯದ ಯುವತಿಯೊಬ್ಬಳು ಪತ್ತೆಯಾದ ಘಟನೆ ಚಕಿತ ಉಂಟುಮಾಡಿದೆ. ಯುವತಿಯ ಮೈಮೇಲೆ ಗಾಯದ ಗುರುತುಗಳು ಕಂಡುಬಂದಿದ್ದು, ಸಾಮೂಹಿಕ ಅತ್ಯಾಚಾರದ ಯತ್ನ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಉಳ್ಳಾಲ ಠಾಣೆ ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪಶ್ಚಿಮ ಬಂಗಾಳದ ಉದ್ಯೋಗ ಹುಡುಕಿಕೊಂಡು ಕೇರಳದ ಉಪ್ಪಳಕ್ಕೆ ಬಂದಿದ್ದ ಯುವತಿ, ತನ್ನ ಸ್ನೇಹಿತನೊಂದಿಗೆ ಮಂಗಳೂರಿಗೆ ಆಗಮಿಸಿದ್ದಳು. ಮಧ್ಯರಾತ್ರಿಯ ವೇಳೆ ಗಲಾಟೆ ಬಳಿಕ ಮನೆಯಿಂದ ಒಬ್ಬಳೇ ಹೊರ ಬಂದಿದ್ದಳು. ಈ ವೇಳೆ ಸಿಕ್ಕ ರಿಕ್ಷಾ ಚಾಲಕನಿಗೆ ಸಹಾಯ ಕೇಳಿದ್ದಳು ಎನ್ನಲಾಗಿದೆ.
ಆರೋಪಿಗಳಾದ ರಿಕ್ಷಾ ಚಾಲಕ ಹಾಗೂ ಆತನ ಇಬ್ಬರು ಸ್ನೇಹಿತರು ಯುವತಿಗೆ ಅಮಲು ಪದಾರ್ಥ ನೀಡಿದ ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರದ ಯತ್ನ ನಡೆಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.










