ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಮರಳಿದ ರಾಜ್ಯದ 170 ಮಂದಿ


ಮಂಗಳೂರು : ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಬಜಪೆಯ ಕುಟುಂಬಸಹಿತ ಕರ್ನಾಟಕ ರಾಜ್ಯದ 170 ಮಂದಿ ವಿಶೇಷ ವಿಮಾನದಲ್ಲಿ ಗುರುವಾರ ಸಂಜೆ ಬೆಂಗಳೂರಿಗೆ ಆಗಮಿಸಿದರು.
ಬಜಪೆ ಅಂತೋನಿಕಟ್ಟೆ ನಿವಾಸಿಗಳಾದ ಐವನ್ ಮಥಾಯಸ್ , ಪ್ರಿಯಾ ದಂಪತಿ ಹಾಗೂ ಮಕ್ಕಳಾದ ಐವಲ್ ಹಾಗೂ ಐಸನ್ ಅವರು ಎ.22ರಂದು ಕಾಶ್ಮೀರಕ್ಕೆ ತೆರಳಿದ್ದರು. ಕಾಶ್ಮೀರದ ಕೆಲ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಬಳಿಕ ಶ್ರೀನಗರದ ರೆಸಾರ್ಟ್ ಒಂದರಲ್ಲಿ ಉಳಿದುಕೊಂಡಿದ್ದು ಊರಿಗೆ ಬರಲಾಗದೆ ಸಿಲುಕಿದ್ದರು. ಪಹಲ್ಗಾಮ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಎಲ್ಲೆಡೆ ಕರ್ಫ್ಯೂ ವಿಧಿಸಲಾಗಿದ್ದು ಶ್ರೀನಗರದ ಹಲವೆಡೆ ಬುಧವಾರ ಹಾಗೂ ಗುರುವಾರ ಸ್ಥಳೀಯರು ಧರಣಿ ನಡೆಸುತ್ತಿದ್ದರು.
ಹೆಲ್ಪ್ ಲೈನ್ ಗೆ ಕರೆ :
ಪರಿಸ್ಥಿತಿಯನ್ನು ಗಮನಿಸಿ ಜಿಲ್ಲಾ ಹಾಗೂ ರಾಜ್ಯ ಹೆಲ್ಪ್ ಲೈನ್ ಗೆ ಕರೆಮಾಡಿ ಸಹಾಯ ಕೇಳಿದ್ದು ನಿರಂತರ ಸಂಪರ್ಕದಲ್ಲಿದ್ದು ಸರಕಾರ ವಿಶೇಷ ವಿಮಾನವೊಂದರ ವ್ಯವಸ್ಥೆ ಮಾಡಿ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ 170 ಮಂದಿಯನ್ನು ಸುರಕ್ಷಿತವಾಗಿ ಬೆಂಗಳೂರಿಗೆ ತಲುಪಿಸಿದೆ. ಬಜಪೆಯ ಐವನ್ ಕುಟುಂಬದ ಪ್ರವಾಸದ ಕಾರ್ಯಸೂಚಿಯಂತೆ ಗುರುವಾರ ಹಾಗೂ ಶುಕ್ರವಾರ ಪಹಲ್ಗಾಮ್ ಪ್ರದೇಶದ ಟೂರಿಸ್ಟ್ ಪಾಯಿಂಟ್ ಗಳ ವೀಕ್ಷಣೆ ನಿಗಧಿಯಾಗಿತ್ತು. ಭದ್ರತಾ ವಿಭಾಗದವರು ಸಾಕಷ್ಟು ಭದ್ರತೆಯನ್ನು ಒದಗಿಸಿದ್ದು ಪ್ರವಾಸವನ್ನು ಮಟಕುಗೊಳಿಸಿ ಊರಿಗೆ ಮರಳಲು ನಿರ್ಧರಿಸಿದೆವು ಎಂದು ಪ್ರಿಯಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ವಿಮಾನ ದರ ಏರಿಕೆ :
ಇಂಡಿಗೋ ವಿಮಾನದಲ್ಲಿ ಪ್ರವಾಸದ ಪ್ರಯಾಣ ಬೆಳೆಸಿದ್ದ ಬಜಪೆಯ ಕುಟುಂಬ ಮುಂದಿನ ಸೋಮವಾರ ಪ್ರವಾಸದ ಕಾರ್ಯಸೂಚಿಯಂತೆ ಊರಿಗೆ ಬರಬೇಕಿತ್ತು. ಈ ಹೊತ್ತಲ್ಲಿ ವಿಮಾನ ಸಂಸ್ಥೆ ದರವನ್ನು ಏರಿಸಿದ್ದಲ್ಲದೆ ರೀಫಂಡ್ ಗೊಂದಲ ಉಂಟುಮಾಡಿದ್ದು ಕೇಧವೆನಿಸಿದೆ. ಪೂರ್ತಿ ಪ್ರವಾಸ ಅನುಭವಿಸಲಾಗದ ಬೇಜಾರು ಇದ್ದರೂ ಸೇಫ್ ಆಗಿ ಮರಳಿದ ಖುಷಿ ಇದೆ ಎಂದು ಪ್ರಿಯಾ ಮಾಧ್ಯಮಕ್ಕೆ ತಿಳಿಸಿದರು.
ಕುಟುಂಬವು ಗುರುವಾರ ರಾತ್ರಿ ಬಜಪೆ ಅಂತೋನಿಕಟ್ಟೆಯ ಮನೆಗೆ ಮರಳಿದೆ.













