ಪುಣ್ಯ ಪುಷ್ಕರಿಣಿಗೊಂದು ಉಪ ಕೆರೆ ತೀರ್ಥ ಸ್ನಾನಕ್ಕಾಗಿ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇಗುಲದಲ್ಲಿ ವಿನೂತನ ಯೋಜನೆ

ಶೇರ್ ಮಾಡಿ

ಕ್ಷೇತ್ರವು ಎಲ್ಲಾ ಭಕ್ತರ ಸಹಕಾರದೊಂದಿಗೆ ಶಿಲಾಮಯ ಗರ್ಭಗುಡಿಗಳೊಂದಿಗೆ ನೂತನವಾಗಿ ನಿರ್ಮಾಣಗೊಂಡು ಬ್ರಹ್ಮಕಲಶ ನಡೆಸುವ ಹಂತದಲ್ಲಿದೆ. ಈ ಕ್ಷೇತ್ರಕ್ಕೆ ಮನನೊಂದು ಬರುವಂತಹ ಎಲ್ಲಾ ಭಕ್ತರ ಮನಸ್ಸನ್ನು ತಿಳಿಗೊಳಿಸಿ ಅವರಿಗೆ ಜೀವನದಲ್ಲಿ ಶ್ರೇಯಸ್ಸನ್ನು ಅನುಗ್ರಹಿಸಿಸುವ ಶಕ್ತಿಯ ಪುಣ್ಯಕ್ಷೇತ್ರ ಇದಾಗಿದೆ.


ನೇಸರ ಮಾ.07
: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಏಕೈಕ ವೈದ್ಯನಾಥೇಶ್ವರ ದೇವಳವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೊಕ್ಕಡದ ಈ ಸಾನಿಧ್ಯದಲ್ಲಿರುವ ಪುಷ್ಕರಣಿಯ ನೀರು ಸಂಜೀವಿನಿ ಶಕ್ತಿ ಹೊಂದಿದೆ ಎಂಬ ನಂಬಿಕೆ ತಲತಲಾಂತರಗಳಿಂದ ಬೆಳೆದು ಬಂದಿದೆ, ಭಕ್ತರ ನಂಬಿಕೆಗೆ ಪೂರಕವಾಗಿ ಉಪ ಕೆರೆ ನಿರ್ಮಿಸಲಾಗುತ್ತಿದೆ.
ಸಕಲ ದುರಿತಗಳಿಗೆ ರಾಮಬಾಣವೆಂದೇ ಪ್ರತೀತಿ ಇರುವ ನೀಲಕಂಠ ದೇವರ ಪುಣ್ಯ ಪುಷ್ಕರಿಣಿಯ ನೀರನ್ನು ಸರ್ವ ಭಕ್ತರೂ ತೀರ್ಥ ಸ್ನಾನಕ್ಕೆ ಬಳಸಲು ಯೋಗ್ಯಗೊಳಿಸುವ ಉದ್ದೇಶದಿಂದ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಳದಲ್ಲಿ ಉಪ ಪುಷ್ಕರಣಿಯೊಂದು ನಿರ್ಮಾಣವಾಗುತ್ತಿದೆ.
“ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಳದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಉಡುಪಿಯ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ದೇವಳದ ತೀರ್ಥಸ್ನಾನ ಪುಷ್ಕರಣಿಗೆ ಶಿಲಾನ್ಯಾಸವನ್ನು ಫೆ.20 ರಂದು ನೆರವೇರಿಸಿದರು”.

ವೈದ್ಯನಾಥೇಶ್ವರ ದೇವಳದ ಒಂದು ಭಾಗದಲ್ಲಿ ಪುಷ್ಕರಣಿಯಿದ್ದು, ಇದರ ಮಧ್ಯದಲ್ಲಿ ಉದ್ಭವ ನೀಲಕಂಠನ ಸಾನಿಧ್ಯವಿದೆ.
ಈ ಕೆರೆಯ ನೀರನ್ನು ಪ್ರೋಕ್ಷಣೆಯಾಗಿ, ತೀರ್ಥವಾಗಿ ಬಳಸಿದಲ್ಲಿ ಸಕಲ ದುರಿತಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಈ ಪುಷ್ಕರಣಿಯಲ್ಲಿ ಸ್ನಾನ ಮಾಡುವುದಾಗಲಿ, ಪುಷ್ಕರಣಿಗೆ ಅಕ್ಕಿ, ಅರಳು, ಪ್ಲಾಸ್ಟಿಕ್ ಇತ್ಯಾದಿಗಳನ್ನು ಹಾಕುವುದು, ಕೈಕಾಲು ತೊಳಯುವುದು ಇಲ್ಲಿ ಸಂಪೂರ್ಣ ನಿಷೇಧಿಸಲಾಗಿದೆ. ಭಕ್ತರು ದೇವಳಕ್ಕೆ ಬಂದಾಗ ಒಂದೊಮ್ಮೆ ದೇಗುಲ ಮುಚ್ಚಿದ್ದಲ್ಲಿ ಕೆರೆಯ ನೀರನ್ನು ಚಿಮುಕಿಸಿಕೊಂಡರೂ ಸಾಕು, ದೇವರ ಪೂರ್ಣಾನುಗ್ರಹ ಪ್ರಾಪ್ತಿಯಾಗುತ್ತದೆ ಎಂಬ ಅಂಶ ೨೦೧೬ರಲ್ಲಿ ವಳಕ್ಕುಂಜ ವೆಂಕಟರಮಣ ಭಟ್ ಅವರ ಮೂಲಕ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಗೋಚರಿಸಿತ್ತು.

ಸ್ಥಳೀಯವಾಗಿ ಪ್ರಸಿದ್ಧಿಯಾಗಿದ್ದ ಕೆರೆ ನೀರಿನ ಮಹತ್ವ ಇತ್ತೀಚಿನ ದಿನಗಳಲ್ಲಿ ದೂರದ ಊರುಗಳಿಗೂ ಹಬ್ಬಿದ್ದು, ನಾನಾ ಕಡೆಗಳಿಂದ ಭಕ್ತರು ವೈದ್ಯನಾಥೇಶ್ವರ ಕ್ಷೇತ್ರಕ್ಕೆ ಬಂದು, ಪುಣ್ಯ ಪುಷ್ಕರಿಣಿಯ ತೀರ್ಥ ಸ್ನಾನ ಮಾಡಿ ಹೋಗುತ್ತಿದ್ದಾರೆ.ಇದೀಗ ತೀರ್ಥ ಸ್ನಾನದ ವ್ಯವಸ್ಥೆಗಾಗಿ ಪುಣ್ಯ ಪುಷ್ಕರಿಣಿಯ ಪಕ್ಕದಲ್ಲೇ ಮತ್ತೊಂದು ಪುಟ್ಟ ಪುಷ್ಕರಣಿ ನಿರ್ಮಾಣಗೊಳ್ಳುತ್ತಿದೆ. ಈ ಮೂಲಕ ಸರ್ವರಿಗೂ ಪೂರ್ಣ ಪ್ರಮಾಣದ ತೀರ್ಥಸ್ನಾನ ಭಾಗ್ಯ ಲಭಿಸಲಿದೆ.


ಶೈವ- ವೈಷ್ಣವ ಸಂಗಮ

ಧರ್ಮಸ್ಥಳ- ಸುಬ್ರಹ್ಮಣ್ಯ ರಸ್ತೆಯಲ್ಲಿ ಕೊಕ್ಕಡ ಜಂಕ್ಷನ್‌ನಿಂದ ಅರ್ಧ ಕಿ.ಮೀ. ಒಳಭಾಗದಲ್ಲಿದೆ ಶ್ರೀ ವೈದ್ಯನಾಥೇಶ್ವರ- ವಿಷ್ಣುಮೂರ್ತಿ ದೇವಸ್ಥಾನ. ಇದನ್ನು ಧನ್ವಂತರಿ ಕ್ಷೇತ್ರವೆಂದೇ ಕರೆಯಲಾಗುತ್ತದೆ. ದಕ್ಷಿಣ ಕನ್ನಡದ ಕೊಕ್ಕಡದಲ್ಲಿ ಮಾತ್ರ ವೈದ್ಯನಾಥ ದೇವಸ್ಥಾನವಿದೆ. ವೈದ್ಯನಾಥ ಗುಡಿಯ ಹೊರಪೌಳಿಯಲ್ಲಿ ಶ್ರೀ ವಿಷ್ಣುಮೂರ್ತಿ ಗುಡಿಯಿದ್ದು, ಶಿವ-ವಿಷ್ಣು ಸಂಗಮದ ಪುಣ್ಯ ತಾಣ ಇದಾಗಿದೆ. ಪಕ್ಕದಲ್ಲಿರುವ ಕೆರೆಯಲ್ಲಿ ಉದ್ಭವ ನೀಲಕಂಠ ಸಾನಿಧ್ಯವಿದೆ. ವೈದ್ಯನಾಥನನ್ನು ಮನೋನಿಯಂತ್ರಕನೆಂದು ಬಣ್ಣಿಸಲಾಗಿದೆ. ನೇವಸ, ಉಬ್ಬಸ, ಅಸ್ತಮಾದಿಂದ ಬಳಲುತ್ತಿರುವವರು ದೇವರಿಗೆ ಕೊಡಪಾನ ಸಮೇತ ಬಾವಿಯ ಹಗ್ಗ (ಬಿಂದಿಗೆ)ವನ್ನು ಹರಕಯ ರೂಪದಲ್ಲಿ ವೈದ್ಯನಾಥನಿಗೆ ನೀಡಿದರೆ ಈ ದೇವ ಆ ರೋಗದಿಂದ ಮುಕ್ತಗೊಳಿಸುತ್ತಾನೆ ಅನ್ನುವ ನಂಬಿಕೆಯಿದೆ. ಶಿವನ ಪರಿವಾರವಾದ ದುರ್ಗೆ, ಗಣಪತಿ, ಶಾಸ್ತಾರ ಗುಡಿಗಳು ಇಲ್ಲಿವೆ. ಕೆರೆ ಸಮೀಪದಲ್ಲಿ ಸುಬ್ರಹ್ಮಣ್ಯನು ನಾಗನ ರೂಪದಲ್ಲಿ ಆರಾಧಿಸಲ್ಪಡುತ್ತಿದ್ದಾನೆ. ಅಣ್ಣಪ್ಪ, ಗುಳಿಗ, ಪಂಜುರ್ಲಿ, ಉಳ್ಳಾಕುಲು, ಉಳ್ಳಾಳ್ತಿಯರ ಜೊತೆಗೆ ಕೊರತಿ ಮತ್ತು ರಕ್ತೇಶ್ವರಿ ದೈವಗಳ ಉಪಾಸನೆಯಿದೆ.


ಮಧ್ವಾಚಾರ್ಯರು ಸಂದರ್ಶಿಸಿದ ಕ್ಷೇತ್ರಗಳಲ್ಲಿ ಇದೂ ಒಂದು

ದೇವಳವು ಕ್ರಿ.ಶ. ೧೦ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂದು ನಂಬಲಾಗಿದೆ. ದ್ವೈತ ಮತ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರು ವೈದ್ಯನಾಥನ ಸನ್ನಿಧಿಗೆ ಭೇಟಿ ನೀಡಿ, ಭಕ್ತರಿಗಾಗಿ ಏಕಾದಶಿ ವೃತದ ಬಗ್ಗೆ “ಶ್ರೀಕೃಷ್ಣಾಮೃತ ಮಹಾರ್ಣವ” ಎಂಬ ಸಂಸ್ಕೃತ ಗ್ರಂಥವನ್ನು ಇಲ್ಲಿಯೇ ರಚಿಸಿದರು. ಸುಬ್ರಹ್ಮಣ್ಯನ ಲಾಂಛನದಲ್ಲಿರುವ ಕುಕ್ಕುಟ (ಕೋಳಿ)ಗಳಿಗೆ ಈ ಊರು ಪ್ರಸಿದ್ಧಿಯಾಗಿತ್ತೆಂದೂ, ಈ ಕಾರಣಕ್ಕೆ ಗ್ರಂಥಗಳಲ್ಲಿ ಇದನ್ನು ಕುಕ್ಕುಟಪುರವೆಂದು ಕರೆಯಲಾಯಿತು ಎನ್ನಲಾಗಿದೆ. ಕಾಲಕ್ರಮೇಣ ಇದನ್ನು ಕೊಕ್ಕಡ ಎಂದು ಕರೆಯಲಾಯಿತು.

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ಯಾಗ, ಶತರುದ್ರಾಭಿಷೇಕ, ಮಹಾರುದ್ರಯಾಗ

ನೇಸರ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ🙏

-ಜಾಹೀರಾತು-

Leave a Reply

error: Content is protected !!