

ನೆಲ್ಯಾಡಿ: ಉದನೆ ಸಂತ ತೋಮಸರ ಪೊರೋನಾ ದೇವಾಲಯದ ವಾರ್ಷಿಕ ಹಬ್ಬ ಹಾಗೂ ತಿರುಶೇಷಿಪ್ಪ್ ವಣಕ್ಕಂ ಕಾರ್ಯಕ್ರಮದ ಪ್ರಯುಕ್ತ ಬೆಳ್ತಂಗಡಿ ಧರ್ಮಪ್ರಾಂತ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಗುರುವಾರ ಉದನೆ ಸಂತ ತೋಮಸರ ಪೊರೋನಾ ಪುಣ್ಯಕ್ಷೇತ್ರದ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಪಂದ್ಯಾಟವನ್ನು ಉದ್ಘಾಟಿಸಿದ ನೆಲ್ಯಾಡಿಯ ಧರ್ಮಗುರು ಅತಿ ವಂ.ರೆ.ಫಾ. ಶಾಜಿ ಮ್ಯಾಥ್ಯೂ ಅವರು ಮಾತನಾಡುತ್ತಾ, “ಕ್ರೀಡೆ ಧಾರ್ಮಿಕ ಚಟುವಟಿಕೆಗಳೊಂದಿಗೆ ಬೆರೆತು ಒಬ್ಬ ವ್ಯಕ್ತಿಯ ಸಾಂಸ್ಕೃತಿಕ ಬೆಳವಣಿಗೆಗೆ ನೆರವಾಗುತ್ತದೆ. ಇಂದಿನ ಯುವಪೀಳಿಗೆ ಶಾರೀರಿಕ ಚಟುವಟಿಕೆಯಿಂದ ದೂರವಾಗುತ್ತಿರುವುದರಿಂದ ದೈಹಿಕ ಸಮಸ್ಯೆಗಳು ಹೆಚ್ಚುತ್ತಿರುವ ಪರಿಸ್ಥಿತಿ ಕಂಡುಬರುತ್ತಿದೆ. ಧಾರ್ಮಿಕ ಕೇಂದ್ರಗಳು ಇದರೊಂದಿಗೆ ಶಾರೀರಿಕ ಶ್ರಮವನ್ನೂ ಪ್ರೋತ್ಸಾಹಿಸಬೇಕಾಗಿದೆ,” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ವರ್ಗೀಸ್ ಕೈಪನಡ್ಕ ಅವರು ಶುಭಾಶಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ರೆ.ಫಾ. ಸುನಿಲ್, ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆ.ಫಾ.ಜೈಸನ್ ಸೈಮನ್, ರೆ.ಫಾ. ಜೋಬಿಶ್, ರೆ.ಫಾ. ಮ್ಯಾಥ್ಯೂ ವೆಲ್ಲಚೋಲಿಲ್, ರೆ.ಫಾ.ಜೋಜೋ ಪುತ್ತನ್ ಪರಂಬಿಲ್, ರಂಜಿತ್ ಕಡ್ ವಿಲ್ ಹಾಗೂ ಸಂತೋಷ್ ಕೊಳತ್ತಿನಲ್ ಉಪಸ್ಥಿತರಿದ್ದರು.
ಚರ್ಚ್ ನ ಧರ್ಮಗುರು ರೆ.ಫಾ.ಸಿಬಿ ತೋಮಸ್ ಪ್ರಾಸ್ತಾವಿಕ ದೊಂದಿಗೆ ಸ್ವಾಗತಿಸಿದರು. ಸನ್ನಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಾಲಿಬಾಲ್ ಪಂದ್ಯಾಟವು ನಡೆಯಿತು. ಪ್ರಥಮ ಬಹುಮಾನ ತೋಟತ್ತಾಡಿ ತಂಡ, ದ್ವಿತೀಯ ಬಹುಮಾನ ಕಳಂಜ ತಂಡ, ತೃತೀಯ ಬಹುಮಾನ ಬಂಗಾಡಿ ತಂಡ,ಚತುರ್ಥ ಬಹುಮಾನ ಫೋರೋನಾ ಚರ್ಚ್ ತಂಡ, ಉತ್ತಮ ಆಲ್ ರೌಂಡರ್ ಜೋಸೆಫ್, ಉತ್ತಮ ಹೊಡೆತಗಾರ ಸ್ಟೀವನ್, ಉತ್ತಮ ಎಸೆತಗಾರ ಸಿನೋಜ್ ಪಡೆದುಕೊಂಡರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಮನೋಜ್ ಅವರು ನಿರೂಪಿಸಿದರು.
ಉದನೆ ಸಂತ ತೋಮಸರ ಪೊರೋನಾ ದೇವಾಲಯದ ವಾರ್ಷಿಕ ಹಬ್ಬ ಹಾಗೂ ತಿರುಶೇಷಿಪ್ಪ್ ವಣಕ್ಕಂ ಮೇ. 9ರಿಂದ 11ರ ವರೆಗೆ ನಡೆಯಲಿದೆ. ಮೇ.9ರಂದು ಸಂಜೆ 4:30 ರಿಂದ ಧ್ವಜಾರೋಹಣ ದಿವ್ಯ ಬಲಿ ಪೂಜೆ ಹಾಗೂ ಸಮಾಧಿ ಸಂದರ್ಶನ. ಮೇ.10 ರಂದು ಸಂಜೆ 4 ರಿಂದ ಪವಿತ್ರ ಸ್ವರೂಪಗಳ ಪ್ರತಿಷ್ಠೆ, ದಿವ್ಯ ಬಲಿಪೂಜೆ ಹಾಗೂ ಹಬ್ಬದ ಸಂದೇಶ ಬಳಿಕ ಲದೀಞï , ಹಬ್ಬದ ಮೆರವಣಿಗೆ, ಸಮಾರೋಪ ಆಶೀರ್ವಾದ ಸ್ನೇಹ ಭೋಜನ ಹಾಗೂ ಸಂಜೆ 7.45 ರಿಂದ ಲೇಸರ್ ಶೋ, ಮೇಘ ಲೈವ್ ಮ್ಯೂಸಿಕ್. ಮೇ.11ರಂದು ಸಂಜೆ 4:30 ರಿಂದ ವಿಜೃಂಭಣೆಯ ಹಬ್ಬದ ದಿವ್ಯ ಬಲಿ ಪೂಜೆ, ಪ್ರವಚನ, ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷರಾದ ಪರಮಪೂಜ್ಯ ಲಾರೆನ್ಸ್ ಮುಕ್ಕುಯಿ, ಲದೀಞ , ಹಬ್ಬದ ಮೆರವಣಿಗೆ, ಸಮಾರೋಪ ಆಶೀರ್ವಾದ, ಸ್ನೇಹ ಭೋಜನ. ಕಾರ್ಯಕ್ರಮಗಳು ನಡೆಯಲಿದೆ. ಸಂಪೂರ್ಣ ಕಾರ್ಯಕ್ರಮದ ಸಹಕಾರವನ್ನು ಸಂತೋಷ್ ಕುಳತ್ತಿನಾಳ್ ಹಾಗೂ ಕುಟುಂಬಸ್ಥರು ವಹಿಸಲಿದ್ದಾರೆ ಎಂದು ಚರ್ಚ್ ನ ಧರ್ಮ ಗುರುಗಳಾದ ರೆ.ಫಾ.ಸಿಬಿ ತೋಮಸ್ ಹಾಗೂ ಆಡಳಿತದಾರರು ಮತ್ತು ಧರ್ಮಕ್ಷೇತ್ರದ ಸರ್ವ ಸದಸ್ಯರು ತಿಳಿಸಿದರು.













