

ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷ ವಿ.ಜೆ.ಸೆಬಾಸ್ಟಿನ್ ಅವರು ನಿರ್ಮಿಸಿದ ಕೃಷಿ ಹೊಂಡ ಹಾಗೂ ಮಿಶ್ರ ಕೃಷಿ ಮಾದರಿ ಇತ್ತೀಚೆಗೆ ರಾಜ್ಯ ಮಟ್ಟದಲ್ಲಿಯೂ ಗಮನ ಸೆಳೆದಿದೆ. ಕೃಷಿ ಇಲಾಖೆಯ ಕೃಷಿಭಾಗ್ಯ ಪ್ಯಾಕೇಜ್ ಅಡಿಯಲ್ಲಿ ಶೇ.50ರಷ್ಟು ಅನುದಾನದ ನೆರವಿನಿಂದನಿರ್ಮಿತವಾದ ಈ ಹೊಂಡವು, ಸಮಗ್ರ ಕೃಷಿಗೆ ಉತ್ತಮ ಮಾದರಿಯಾಗಿ ಪರಿಣಮಿಸಿದೆ. 21 ಮೀಟರ್ ಉದ್ದ, 21 ಮೀ ಅಗಲ ಹಾಗೂ 3 ಮೀ ಆಳದ ಈ ಕೃಷಿ ಹೊಂಡಕ್ಕೆ ಪ್ಲಾಸ್ಟಿಕ್ ಹೋದಿಕೆ ಹಾಕಲಾಗಿದೆ. ಹೊಂಡದ ಸುತ್ತಲೂ ಮೆಸ್ ಅಳವಡಿಸಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ.

ಇದನ್ನು ಎತ್ತರದ ಪ್ರದೇಶದಲ್ಲಿ ನಿರ್ಮಿಸಿರುವುದರಿಂದ, ವಿದ್ಯುತ್ ಬಳಕೆಯ ಅಗತ್ಯವಿಲ್ಲದೆ ಸೈಫನ್ ತಂತ್ರದ ಮೂಲಕ ನೀರನ್ನು ಪೈಪುಗಳಿಂದ ಕೃಷಿಗೆ ಬಳಕೆ ಮಾಡಲಾಗುತ್ತಿದೆ. ಇದಲ್ಲದೆ, ಹೊಂಡದಲ್ಲಿ ಸಾವಿರಕ್ಕಿಂತ ಹೆಚ್ಚು ಮೀನಿನ ಮರಿಗಳನ್ನು ಬಿಡಲಾಗಿದೆ. ಇದರಿಂದ ಮೀನಿನ ಬೆಳೆಯೂ ಸಫಲವಾಗಿದ್ದು, ಕೃಷಿಯೊಂದಿಗೆ ಮೀನುಗಾರಿಕೆ ಮಾಡಲಾಗುತ್ತಿದೆ. ಈ ನೀರಾವರಿ ವ್ಯವಸ್ಥೆಯಿಂದ ಅವರು ಅಡಿಕೆ,ತೆಂಗು, ಬಾಳೆ, ಹಲಸು, ಮಾವು, ಹಣ್ಣಿನ ಗಿಡಗಳನ್ನು,ತರಕಾರಿಯನ್ನು ಸೇರಿದಂತೆ ಮಿಶ್ರ ಕೃಷಿಯನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ.

ಕೃಷಿ ಸಚಿವರ ಭೇಟಿ:
ಈ ಮಾದರಿ ಕೃಷಿಯು ರಾಜ್ಯದ ಗಮನ ಸೆಳೆದ ಹಿನ್ನೆಲೆಯಲ್ಲಿ, ಇತ್ತೀಚೆಗೆ ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಹಾಗೂ ಅವರ ಧರ್ಮಪತ್ನಿ ಸೆಬಾಸ್ಟಿನ್ ಅವರ ಮನೆಗೆ ಭೇಟಿ ನೀಡಿದರು. ಅವರು ಕೃಷಿ ಹೊಂಡ ಹಾಗೂ ಮಿಶ್ರ ಕೃಷಿ ವೀಕ್ಷಿಸಿ ಆವರಣದ ಸ್ವಚ್ಛತೆ, ಯೋಜನೆಯ ಪರಿಣಾಮಕಾರಿತ್ವ ಹಾಗೂ ನಾವೀನ್ಯತೆಯನ್ನು ಮೆಚ್ಚಿ ಪ್ರಶಂಸಿಸಿದರು. ಸಚಿವರು ತಮ್ಮ ಮಾತುಗಳಲ್ಲಿ, ಇಂತಹ ಮಾದರಿಯ ಹೊಂಡಗಳು ಮತ್ತು ಮಿಶ್ರ ಕೃಷಿಯು ರೈತರ ಭವಿಷ್ಯಕ್ಕೆ ಬೆಳಕಿನ ಕಿರಣ. ಇವುಗಳ ಪ್ರಚಾರದಿಂದ ಇನ್ನೂ ಹೆಚ್ಚು ರೈತರು ಸತ್ವವಂತ ಕೃಷಿಕರಾಗಬಲ್ಲರು ಎಂದರು.
ನನ್ನ ಕೃಷಿಯ ಬೆಳವಣಿಗೆಗೆ ನೀರಿನ ಕೊರತೆಯೇ ದೊಡ್ಡ ಅಡ್ಡಿಯಾಗಿತ್ತು. ಆದರೆ ಕೃಷಿ ಹೊಂಡ ನಿರ್ಮಾಣದ ನಂತರ, ನನಗೆ ಕೃಷಿಯಲ್ಲಿ ಹೊಸ ಆಶಾಕಿರಣ ಕಾಣಿಸಲಾಯಿತು. ಈಗ ನಾನು ನನ್ನ ಹೊಲದ ಎಲ್ಲ ಖಾಲಿ ಜಾಗಗಳನ್ನು ಬಳಸಿಕೊಂಡು ಕೃಷಿ ಮಾಡಿದ್ದೇನೆ ಹಾಗೂ ಮೀನಿನ ಸಂಕುಲ ಬೆಳೆಗೆ ಚಾಲನೆ ನೀಡಿದ್ದೇನೆ. ಈ ಕೃಷಿ ಹೊಂಡ ನಿಜಕ್ಕೂ ನನ್ನ ಬದುಕಿಗೆ ವರದಾನವಾಯಿತು, ನಮ್ಮ ಸರ್ಕಾರದ ಕೃಷಿ ಇಲಾಖೆ ನೀಡುತ್ತಿರುವ ಅನುದಾನ ಸೌಲಭ್ಯಗಳು ನಿಜಕ್ಕೂ ರೈತರ ಹಿತಕ್ಕಾಗಿ ರೂಪಿಸಲ್ಪಟ್ಟಿವೆ. ಯಾವ ರೈತರಿಗೂ ಇಂತಹ ಯೋಜನೆಗಳಿಂದ ದೂರವಿರಬೇಕಾಗಿಲ್ಲ. ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿಸಿ, ತಾವು ನಂಬಿಕೆ ಇಟ್ಟು ಕೆಲಸ ಮಾಡಿದರೆ ಕೃಷಿಯಲ್ಲಿ ಯಶಸ್ಸು ಖಂಡಿತ,
-ವಿ.ಜೆ.ಸೆಬಾಸ್ಟಿನ್ ಕೊಕ್ಕಡ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರು












