

ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿ ಕುಟುಂಬ ಕಲಹದ ಹಿನ್ನೆಲೆಯಲ್ಲಿ ಚಿಕ್ಕಪ್ಪನ ಮಗ ಸತೀಶ್‌ನಿಗೆ ಬೈಯುತ್ತಿದ್ದ ಸಂದರ್ಭದಲ್ಲಿ ಸತೀಶ್ ಅವರ ಅಣ್ಣ ಹರಿಪ್ರಸಾದ್ ಎಂಬಾತ ಹಲ್ಲೆ ಮಾಡಿ ಕೊಂದ ಘಟನೆ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ಶರತ್ ಕುಮಾರ್(34) ಎಂದು ಗುರುತಿಸಲಾಗಿದ್ದು ಚಿಕ್ಕಪ್ಪ ಜನಾರ್ಧನ ಗೌಡರವರ ಕುಟುಂಬದೊಂದಿಗೆ ಕೆಲವು ದಿನಗಳಿಂದ ಜಾಗ ಮತ್ತು ಕಟ್ಟಿಗೆಯ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು.
ಮೃತ ಶರತ್ ಕುಮಾರ್ ಅವರ ಜಾಗದಲ್ಲಿದ್ದ ಕಟ್ಟಿಗೆಗಳನ್ನು ಜನಾರ್ಧನ ಗೌಡರವರ ಮನೆಗೆ ಕೊಂಡೊಯ್ಯಲು ಯತ್ನಿಸಿದಾಗ ಗಲಾಟೆ ಉಂಟಾದದ್ದು, ಆಕ್ರೋಶ ಇನ್ನಷ್ಟು ತೀವ್ರಗೊಂಡಿತು. ಈ ಹಿನ್ನೆಲೆಯಲ್ಲಿ ಶರತ್ ಕುಮಾರ್ ಅವರು ಶುಕ್ರವಾರ ರಂದು ರಾತ್ರಿ 8.00 ರಿಂದ 8.30ರ ನಡುವೆ ಜನಾರ್ಧನ ಗೌಡರವರ ಮನೆಗೆ ಹೋಗಿ ಅವರ ಮಗ ಸತೀಶ್‌ನಿಗೆ ಬೈಯುತ್ತಿದ್ದ ಸಂದರ್ಭದಲ್ಲಿ, ತೋಟದಿಂದ ಬಂದ ಹರಿಪ್ರಸಾದ್ ಎಂಬಾತ, ತನ್ನ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಶರತ್ ಕುಮಾರ್ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ.
ಹಲ್ಲೆಯ ತೀವ್ರತೆಗೆ ತುತ್ತಾಗಿ ಶರತ್ ಅವರು ಅಂಗಳದಲ್ಲಿ ಕುಸಿದು ಬಿದ್ದಿದ್ದಾರೆ. ನಂತರ ಮತ್ತೊಮ್ಮೆ ತಲೆಗೆ ಹೊಡೆದ ಆರೋಪ ಕೇಳಿ ಬಂದಿದ್ದು, ಗಂಭೀರವಾಗಿ ಗಾಯಗೊಂಡ ಶರತ್ ಅವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್ ಐ.ಪಿ.ಎಸ್ ಅವರು ಭೇಟಿ ನೀಡಿ ಪರಿಶೀಲಿಸಿ, ತನಿಖೆಯ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿರುತ್ತಾರೆ. ಈ ಕುರಿತು ಮೃತನ ಅಣ್ಣ ಚರಣ್ ಕುಮಾರ್ ಅವರು ನೀಡಿದ ದೂರುಯಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಹರಿಪ್ರಸಾದ್ ವಿರುದ್ಧ ತನಿಖೆ ಮುಂದುವರಿದಿದೆ.













