

ನೆಲ್ಯಾಡಿ: ಶ್ರೀರಾಮ ವಿದ್ಯಾಲಯ, ಸೂರ್ಯನಗರ-ನೆಲ್ಯಾಡಿಯಲ್ಲಿ ಬುಧವಾರದಂದು ಕನ್ನಡ ಮಾಧ್ಯಮ ವಿಭಾಗದ ನೂತನವಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಸಂಸ್ಕೃತಿಪರವಾಗಿ ಹಾಗೂ ಭಾವಪೂರ್ಣವಾಗಿ ಸ್ವಾಗತ ಕಾರ್ಯಕ್ರಮ ನಡೆಯಿತು.
ನೂತನ ವಿದ್ಯಾರ್ಥಿಗಳನ್ನು ಶಾಲೆಯ ಶಿಕ್ಷಕರು ಆರತಿ ಎತ್ತಿ, ತಿಲಕಧಾರಣೆ ಮಾಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಹಿರಿಯರು ಸಿಹಿ ನೀಡಿ ಆಶೀರ್ವಾದಿಸಿದರು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಭಕ್ತಿಯುತ ಶಿಕ್ಷಣ ಪ್ರಾರಂಭಕ್ಕೆ ಶ್ರದ್ಧೆಯ ಮನೋಭಾವ ಮೂಡಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಭಾರತಿ ಶಾಲೆ ಆಲಂಕಾರಿನ ಗೌರವಾಧ್ಯಕ್ಷ ಕೃಷ್ಣಕುಮಾರ್ ಆತ್ರಿಜಾಲು ಅವರು, “ಶಾಲೆಯಲ್ಲಿ ಕಲಿಯುವ ಸಂಸ್ಕಾರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಸಂಸ್ಕಾರಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಹರಡಿ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕಾಗಿದೆ” ಎಂದು ಶಿಷ್ಟಸಂದೇಶ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀರಾಮ ವಿದ್ಯಾಲಯದ ಕಾರ್ಯದರ್ಶಿ ಮೂಲಚಂದ್ರ ಕಾಂಚನ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ ಪ್ರಾಸ್ತಾವಿಕ ಭಾಷಣ ಮಾಡಿದರು. ಸುಜನ ಮಾತಾಜಿ ಸ್ವಾಗತಿಸಿದರು, ಕೋಮಲಾಂಗಿ ಮಾತಾಜಿ ವಂದಿಸಿದರು, ಭಾಗೀರಥಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.










