

ಕೊಕ್ಕಡ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕೊಕ್ಕಡ ಬಳಿಯ ಸೌತಡ್ಕದಲ್ಲಿ ಎರಡು ಕಾಡಾನೆಗಳ ದಾಳಿಗೆ ಬಲಿಯಾದ ಬಾಲಕೃಷ್ಣ ಶೆಟ್ಟಿ ಅವರ ಮನೆಗೆ ಶಾಸಕ ಹರೀಶ್ ಪೂಂಜ ಅವರು ಶುಕ್ರವಾರ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ನೀಡಿದರು.

ಬಳಿಕ ಮಾತನಾಡಿದ ಅವರು, ಅರಣ್ಯ ಸಚಿವರನ್ನು ಸಂಪರ್ಕಿಸಿ ಗರಿಷ್ಠ ಮಟ್ಟದ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದೇನೆ. ಮೃತರ ಪತ್ನಿಯನ್ನು ಸೌತಡ್ಕ ದೇವಸ್ಥಾನದಲ್ಲಿ ಖಾಯಂ ಉದ್ಯೋಗಿಯಾಗಿ ನೇಮಿಸುವಂತೆ, ಮಗಳಿಗೂ ಕೂಡ ದೇವಸ್ಥಾನದಲ್ಲಿ ಉದ್ಯೋಗಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಸರಕಾರಕ್ಕೆ ಮನವಿ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಬೆಳ್ತಂಗಡಿ ಹಾಗೂ ಕೊಕ್ಕಡ ಪರಿಸರದಲ್ಲಿ 200-300 ಎಕರೆ ಪ್ರದೇಶ ಮೀಸಲಿಟ್ಟು ಆನೆ ಕ್ಯಾಂಪ್ ನಿರ್ಮಾಣ ಮಾಡಬೇಕು. ಕೃಷಿಗಳನ್ನು ಹಾಳು ಮಾಡುವಂತಹ ಆನೆಗಳು ಇದ್ದಲ್ಲಿ ಅವುಗಳನ್ನು ಹಿಡಿದು ಆನೆ ಕ್ಯಾಂಪ್ ಗಳಿಗೆ ಹಾಕಿದ್ದಲ್ಲಿ ಅನೇಕ ಕೃಷಿಕರಿಗೆ ಅನುಕೂಲವಾಗಲಿದೆ ಎಂಬ ದೃಷ್ಟಿಯಲ್ಲಿ ಈಗಾಗಲೇ ಸರಕಾರಕ್ಕೆ ಆಗ್ರಾ ಮಾಡಿದ್ದೇನೆ ಹಾಗೂ ಕಳೆದ ಕೆಡಿಪಿ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಿದ್ದಾಗಿ ಅವರು ಹೇಳಿದರು.
ಈ ಜಿಲ್ಲೆಯಲ್ಲಿ ಆನೆ ಕಾರಿಡಾರ್‌ಗಳಲ್ಲಿ ಬಲಿಷ್ಠ ತಡೆಬೇಲಿ ನಿರ್ಮಾಣ ಅಗತ್ಯವಾಗಿದೆ. ಕಾಡಾನೆಗಳ ಜೊತೆಗೆ ಹಂದಿ, ಮಂಗ, ನವಿಲು ಮುಂತಾದ ಪ್ರಾಣಿಗಳ ಕಾಟದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಪ್ರಾಣಿಗಳಿಗೆ ಜೀವಿಸುವ ಹಕ್ಕಿದ್ರೆ, ಮನುಷ್ಯನಿಗೂ ಜೀವನ ಸಾಗಿಸಲು ಹಕ್ಕಿದೆ. ಸರ್ಕಾರ ಇದಕ್ಕೆ ಆದ್ಯತೆ ನೀಡಬೇಕು ಎಂದರು.
ಬೈಂದೂರು ಮಾದರಿಯಲ್ಲಿ ಇಲ್ಲಿ ಆನೆಗಳನ್ನು ಸೆರೆಹಿಡಿದು ಬೇರೆ ಕಡೆ ಸ್ಥಳಾಂತರಿಸುವ ಕಾರ್ಯಾಚರಣೆಗೆ ಕ್ರಮ ಜರುಗಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಬೆಳ್ತಂಗಡಿ ತಾಲೂಕಿನ ಕೃಷಿ ಚಟುವಟಿಕೆಗಳಿಗೆ ಕಾಡಾನೆಗಳು ದಾಳಿ ನಡೆಸಿ ಹಾನಿ ಮಾಡುತ್ತಿರುವ ಬಗ್ಗೆ ತಾನು ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದರೂ ಕೃಷಿಕರ ಭಾವನೆಗಳಿಗೆ ಸ್ಪಂದಿಸದ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕರು ಸಂತ್ರಸ್ತ ಕೃಷಿಕರ ನೋವನ್ನು ಅಂದು ಸದನದಲ್ಲಿ ತಾನು ವ್ಯಕ್ತಪಡಿಸಿರುವುದನ್ನು ಅಪಹಾಸ್ಯ ಮಾಡಿದ್ದರು. ಆದರೆ ಇದರ ಗಂಭೀರತೆಗೆ ಓರ್ವ ನಾಗರೀಕನನ್ನು ಕಳೆದುಕೊಂಡದ್ದು ತನಗೆ ಅತೀವ ನೋವನ್ನುಂಟು ಮಾಡಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಆನೆ ದಾಳಿ ಮಾಡುವ ಕೃಷಿ ಪ್ರದೇಶ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಸೂಕ್ತ ತಡೆಬೇಲಿ ನಿರ್ಮಾಣ ಮಾಡಲು ಕ್ರಮ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಪ್ರೊಬೆಷನರಿ ಅರಣ್ಯಾಧಿಕಾರಿ ಹಸ್ತಾ ಶೆಟ್ಟಿ, ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ಬೇಬಿ, ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಆಲಂಬಿಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.










