
ಪಟ್ರಮೆ: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಮಣಿಯೇರ್ ನಿವಾಸಿಗಳ ರಸ್ತೆಯ ಕನಸು ನನಸಾಗದೆ ಏಳು ವರ್ಷಗಳಾಗಿವೆ. ಈ ಅವಧಿಯಲ್ಲಿ ಮೂರು ಬಾರಿ ಪ್ರಧಾನಿಗೆ ಪತ್ರ ಬರೆಯಲಾಗಿದೆ. ಆದರೆ ಸಮಸ್ಯೆ ಮಾತ್ರ ಈಗಲೂ ಜೀವಂತವಾಗಿದೆ..! ಜನರ ಬವಣೆ ಕೇಳದಂತಾಗಿದೆ.
ಮಣಿಯೇರ್ ಗ್ರಾಮಕ್ಕೆ ಹೋಗಬೇಕಾದರೆ ಪಟ್ರಮೆ ಸೇತುವೆ ಪಕ್ಕದ ಹಾದಿಯಲ್ಲಿ 2.5 ಕಿ.ಮೀ.ಸಾಗಬೇಕು. ಆದರೆ ಈ ಮಾರ್ಗದಲ್ಲಿ ಯಾವುದೇ ವಾಹನ ಓಡಿಸುವುದು ಅಸಾಧ್ಯ. ಬೈಕ್‌ನಲ್ಲಿ ಇಬ್ಬರು ಪ್ರಯಾಣಿಸಿದರೆ ಪಲ್ಟಿ ಹೊಡೆಯುವ ಅಪಾಯವಿದೆ. ಕಾರುಗಳು ಸಾಗುವುದಂತು ದೂರದ ಕನಸು.
ಮೋದಿಗೆ 3 ಬಾರಿ ಪತ್ರ:
ಸ್ಥಳೀಯ ಯುವಕ ಗಿರೀಶ್ ಮಣಿಯೇರ್ ಅವರು ಸಮಸ್ಯೆಗೆ ಪರಿಹಾರ ಕೋರಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದರು. 2024ರ ಆಗಸ್ಟ್ ನಲ್ಲಿ ಬರೆದ ಪತ್ರಕ್ಕೆ ತಕ್ಷಣವೇ ಉತ್ತರ ಬಂದಿದೆ. ಜಿಪಂ ಮಟ್ಟದಲ್ಲೂ ಪ್ರಸ್ತಾಪವಾಗಿದೆ. ಆದರೆ ಏನೂ ಫಲ ಸಿಗದೇ ಹೋದಾಗ ಇನ್ನೆರಡು ಬಾರಿ ಮತ್ತೆ ಪತ್ರ ಬರೆದು ತಮ್ಮ ಅಳಲನ್ನು ಪ್ರಧಾನಿ ಬಳಿ ಹೇಳಿಕೊಂಡಿದ್ದಾರೆ ಗಿರೀಶ್. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಮಕ್ಕಳಿಗೂ ಬೀದಿ ನರ್ಸ್ರಿ ಜೀವನ:
ಬದಿಪಲ್ಕೆ ಕಿರಿಯ ಪ್ರಾಥಮಿಕ ಶಾಲೆಗೆ ಹೋಗಬೇಕಾದ ಮಕ್ಕಳು ಮಳೆಗಾಲದಲ್ಲಿ ಮಣ್ಣು-ಕೆಸರು ತುಂಬಿದ ರಸ್ತೆಯಲ್ಲಿ ನಡೆಯಬೇಕಾಗಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಹೆದರುತ್ತಿದ್ದಾರೆ. ಆಟೋ, ಜೀಪ್‌ಗಳೂ ಈ ರಸ್ತೆಯಲ್ಲಿ ಹೋಗುವುದಿಲ್ಲ. ಚುನಾವಣೆ ಸಂದರ್ಭ ಕೆಲವು ಕುಟುಂಬಗಳು ಮತದಾನ ಬಹಿಷ್ಕಾರ ಬೆದರಿಕೆ ಹಾಕಿದಾಗ, ರಸ್ತೆ ತಕ್ಷಣ ಮಾಡಿಕೊಡುವ ಭರವಸೆ ನೀಡಿದ ರಾಜಕಾರಣಿಗಳು, ಜನಪ್ರತಿನಧಿಗಳು ಮತ್ತೆ ಇತ್ತ ಬಂದಿಲ್ಲ.
ಇಲ್ಲಿ ಯಾರಿಗಾದರೂ ಆರೋಗ್ಯ ಕೆಟ್ಟರೆ ಹೊತ್ತುಕೊಂಡು ಹತ್ತಿರದ ರಸ್ತೆಗೆ ತಂದು, ಅಲ್ಲಿಂದ ವಾಹನದಲ್ಲಿ ಕರೆದುಕೊಂಡು ಹೋಗಬೇಕಾಗಿದೆ. ಗ್ರಾಪಂ ಸದಸ್ಯರಿಂದ ಹಿಡಿದು ಶಾಸಕರವರೆಗೂ ಮನವಿ ಮಾಡಿದರೂ ಸ್ಪಂದನೆ ಇಲ್ಲ.
-ಡೀಕಯ್ಯ ಮಣಿಯೇರ್, ಸ್ಥಳೀಯರು
35 ವರ್ಷಗಳಿಂದ ಈ ಭಾಗ ಗ್ರಾಪಂಗೆ ಸೇರಿದ್ದರೂ ರಸ್ತೆ ಮಾಡಿಲ್ಲ. ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಕೇಳಿಕೊಂಡೆವು. ಏನೂ ಪ್ರಯೋಜನವಾಗಿಲ್ಲ.
-ಪುಟ್ಟಣ್ಣ ಮಣಿಯೇರು, ಸ್ಥಳೀಯರು.
ಈ ರಸ್ತೆಯಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದರೆ ಕಣ್ಣೀರು ಬರುತ್ತದೆ. ಯಾವ ಆಟೋದವರು, ಜೀಪ್‌ನವರು ಬರುವುದಕ್ಕೆ ಒಪ್ಪುವುದಿಲ್ಲ. ಈ ಸಮಸ್ಯೆಗೆ ತುರ್ತು ಪರಿಹಾರ ಬೇಕು.
-ವಿಜಯ, ಸ್ಥಳೀಯರು











