
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಪಿಎಸ್‌ಐ ಬಂಟ್ವಾಳ ಪೇಟೆಯಲ್ಲಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಸಂಜೆ ನಡೆದಿದೆ.
ಉತ್ತರಕನ್ನಡದ ಕಾರವಾರ ನಿವಾಸಿ ಕೀರಪ್ಪ ಗಟಕಂಬಳಿ(54) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಅವರು ಶಿರಸಿ ಠಾಣೆಯಿಂದ ಕಳೆದ 5 ತಿಂಗಳ ಹಿಂದಷ್ಟೇ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ತನಿಖಾ ವಿಭಾಗದ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಅವರ ಮನೆಮಂದಿ ಉತ್ತರ ಕನ್ನಡದಲ್ಲೇ ಇದ್ದು, ಇವರು ಒಬ್ಬರೇ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ರವಿವಾರ ಬೆಳಗ್ಗೆಯಿಂದ ಕರ್ತವ್ಯಕ್ಕೆ ಹಾಜರಾಗದೆ ಇದ್ದು, ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಸಂಶಯಗೊಂಡ ಪೊಲೀಸರು ಸಂಜೆ ವೇಳೆ ಅವರು ವಾಸಿಸುವ ಬಾಡಿಗೆ ಮನೆಗೆ ಹೋಗಿ ನೋಡಿದಾಗ ಬಾಗಿಲು ಹಾಕಿತ್ತು. ಕರೆದಾಗ ಯಾವುದೇ ಸ್ಪಂದನೆ ನೀಡದೆ ಇದ್ದಾಗ ಕಿಟಕಿಯಲ್ಲಿ ನೋಡಿದಾಗ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.











