ಮೂರನೇ ದಿನಕ್ಕೆ ಕಾಲಿಟ್ಟ ಸೌತಡ್ಕ ಕಾಡಾನೆ ಡ್ರೈವ್ ಕಾರ್ಯಾಚರಣೆ

ಶೇರ್ ಮಾಡಿ

ಕೊಕ್ಕಡ : ಕೊಕ್ಕಡ ಗ್ರಾಮದ ಸೌತಡ್ಕದಲ್ಲಿ ವ್ಯಕ್ತಿಯೊಬ್ಬನ ಪ್ರಾಣವನ್ನೇ ಬಲಿ ಪಡೆದ ಎರಡು ಕಾಡಾನೆಗಳನ್ನು ಕಾಡಿಗೆ ಹಾಯಿಸುವ ಕಾರ್ಯಾಚರಣೆ ಮೂರನೇ ದಿನವಾದ ಭಾನುವಾರವೂ ನಿರಂತರವಾಗಿ ಮುಂದುವರಿದಿದೆ. ಶುಕ್ರವಾರ ಆರಂಭವಾದ ಈ ಆನೆ ಡ್ರೈವ್ ಕಾರ್ಯಾಚರಣೆ ಅರಣ್ಯ ಇಲಾಖೆ ಮತ್ತು ಕುಶಾಲನಗರದ ಎಲಿಫೆಂಟ್ ಟಾಸ್ಕ್ ಫೋರ್ಸ್ ಸಹಯೋಗದಲ್ಲಿ ನಿಗದಿತ ಮಾರ್ಗದಲ್ಲಿ ನಡೆಯುತ್ತಿದೆ.

ಕಾಪಿನಬಾಗಿಲು–ಪೆರಿಯಶಾಂತಿ–ಲಾವತಡ್ಕ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಮಧ್ಯೆ ಕ್ರಾಸ್ ಮಾಡಿಸಿ, ಪಂಜ–ಸುಬ್ರಹ್ಮಣ್ಯ ಅರಣ್ಯ ಪ್ರದೇಶದ ಮೂಲಕ ಪುಷ್ಪಗಿರಿ ಕಾಡಿಗೆ ಕಾಡಾನೆಗಳನ್ನು ಸಾಗಿಸಲು ಬೃಹತ್ ತಂತ್ರಗತ್ಯದೊಂದಿಗೆ ಅಧಿಕಾರಿಗಳು ಮುಂದಾಗಿದ್ದಾರೆ.

ಕಾರ್ಯಾಚರಣೆಯ ನಡುವೆಯೇ ಶನಿವಾರದಂದು ಪೆರಿಯಶಾಂತಿಗೆ ಬಂದ ಆನೆಗಳು ರಸ್ತೆಬದಿಯಲ್ಲಿ ವ್ಯಾಪಾರಿಗಳು ಬಿಸಾಕಿರುವ ಜೋಳ, ಹಣ್ಣು ಹಾಗೂ ಇತರೆ ಆಹಾರದ ವೇಸ್ಟ್‌ಗಳನ್ನು ತಿನ್ನಲು ಆನೆಗಳು ರಸ್ತೆಯತ್ತ ವಾಲಿದ್ದು, ಆನೆಯ ಹೆಜ್ಜೆ ಗುರುತು, ಲದ್ದಿ ಹಾಕಿರುವುದು ಅರಣ್ಯ ಇಲಾಖೆಯ ಗಮನಕ್ಕೆ ಬಂದಿದ್ದು. ಇದು ಅರಣ್ಯ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ. “ಆಹಾರ ಇಲ್ಲಿಯೇ ಸಿಗುತ್ತದೆ ಎಂಬ ಭಾವನೆ ಆನೆಗಳಿಗೆ ಉಂಟಾದರೆ, ಅವು ಮತ್ತೆ ಅರಣ್ಯದ ಕಡೆಗೆ ಹೋಗುವುದನ್ನು ತಡೆಯುತ್ತದೆ, ಎಂದು ಅಧಿಕಾರಿಗಳು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರಿಂದ ದಾಖಲಾಗಿರುವ ದೂರುಗಳ ಹಿನ್ನೆಲೆ ಮತ್ತು ಪ್ರಧಾನಮಂತ್ರಿ ಕಾರ್ಯಾಲಯದಿಂದ ಬಂದಿರುವ ಸೂಚನೆ ಹಿನ್ನೆಲೆಯಲ್ಲಿ ಪೆರಿಯಶಾಂತಿ–ಕುದ್ರಾಯ ಮಾರ್ಗದ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ವ್ಯಾಪಾರ ನಡೆಸುತ್ತಿರುವವರಿಗೆ ಎಚ್ಚರಿಕೆ ನೀಡಲಾಗಿತ್ತು. ಜುಲೈ 15ರೊಳಗೆ ಸ್ವಯಂ ಪ್ರೇರಿತವಾಗಿ ಗೂಡಂಗಡಿ ತೆರವುಗೊಳಿಸುವ ಭರವಸೆ ನೀಡಿದ್ದರೂ, ಆದರೆ ನಿಗದಿತ ಅವಧಿ ಕಳೆದರೂ ಹೆಚ್ಚಿನ ವ್ಯಾಪಾರಿಗಳು ತೆರವುಗೊಳಿಸಿಲ್ಲ ಎಂದು ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನಧಿಕೃತ ವ್ಯಾಪಾರ ನಡೆಸಿ ಆನೆಗಳಿಂದ ಸಾರ್ವಜನಿಕರಿಗೆ ಅಪಾಯ ಉಂಟಾದರೆ, ಅದರ ಹೊಣೆಗಾರರು ನಾವಲ್ಲ. ಕಾನೂನು ಕ್ರಮ ತಪ್ಪದೆ ಕೈಗೊಳ್ಳಲಾಗುವುದು,” ಎಂದು ಎ.ಸಿ.ಎಫ್ ಸುಬ್ಬಯ್ಯ ನಾಯ್ಕ್, ಪ್ರೊಬೆಷನರಿ ಎ.ಸಿ.ಎಫ್ ಹಸ್ತ ಶೆಟ್ಟಿ ಹಾಗೂ ಆರ್.ಎಫ್.ಓ ರಾಘವೇಂದ್ರ ಮಾಧ್ಯಮಗಳಿಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ.

ಭಾನುವಾರದೊಳಗೆ ಸ್ವಯಂ ಪ್ರೇರಿತವಾಗಿ ಗೂಡಂಗಡಿಗಳನ್ನು ತೆರವುಗೊಳಿಸದಿದ್ದರೆ, ಸೋಮವಾರ ಬೆಳಿಗ್ಗೆ ಪೊಲೀಸ್ ಭದ್ರತೆ ಜೊತೆಕೊಂಡು ನೇರವಾಗಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂಬ ಸೂಚನೆ ನೀಡಲಾಗಿದೆ.

  •  

Leave a Reply

error: Content is protected !!