ಹಾರ್ನ್ ಹಾಕಿದ ಎಂಬ ಕಾರಣಕ್ಕೆ ಬಸ್‌ ಚಾಲಕನ ಮೇಲೆ ಹಲ್ಲೆ; ಆರೋಪಿಗಳ ಸೆರೆ

ಶೇರ್ ಮಾಡಿ

ಉಪ್ಪಿನಂಗಡಿ: ರಾಜಹಂಸ ಬಸ್ಸಿನ ಚಾಲಕ ಹಾರ್ನ್ ಹಾಕಿದ ಎಂಬ ಕಾರಣಕ್ಕೆ ಬೈಕ್ ಸವಾರರಿಬ್ಬರು ಬಸ್ಸನ್ನು ಅಡ್ಡ ಹಾಕಿ ಬಸ್ಸಿನ ಚಾಲಕನ ಮೇಲೆ ಹಲ್ಲೆ ನಡೆಸಿದ ಹಾಗೂ ಇದನ್ನು ಪ್ರಶ್ನಿಸಿದ ಪ್ರಯಾಣಿಕನ ಮೇಲೂ ಹೆಟ್‌ನಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ಬುಧವಾರ ನಡೆದಿದೆ.

ಬೆಂಗಳೂರಿನಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ರಾಜಹಂಸ ಬಸ್ಸಿನ ಚಾಲಕ ರಿಯಾಜ್ ಅಹಮ್ಮದ್ ಎಂಬವರು ಬಸ್ಸಿಗೆ ಅಡ್ಡವಾಗಿ ಸಂಚರಿಸುತ್ತಿದ್ದ ಬೈಕೊಂದಕ್ಕೆ ದಾರಿ ಬಿಟ್ಟು ಕೊಡುವ ಸಲುವಾಗಿ ಹಾರ್ನ್ ಹಾಕಿದ್ದರು. ಇದರಿಂದ ಕೆರಳಿದ ಬೈಕ್ ಸವಾರರಿಬ್ಬರು ಬಸ್ಸನ್ನು ಅಡ್ಡಗಟ್ಟಿ ಬಸ್ಸಿನ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿ ಹಲ್ಲೆಯನ್ನು ತಡೆಯಲು ಬಂದ ಬಸ್ಸಿನ ಪ್ರಯಾಣಿಕ ಅವಿನಾಶ್ ಮೇಲೂ ಮುಗಿಬಿದ್ದ ಬೈಕ್ ಸವಾರರು ಹೆಲ್ಮಟ್ ನಿಂದ ಅವಿನಾಶ್ ರವರ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಈ ಬಗ್ಗೆ ಬಸ್ಸಿನ ಚಾಲಕ ಬೈಕ್‌ ಸವಾರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ದೂರು ಸ್ವೀಕರಿಸಿದ ಉಪ್ಪಿನಂಗಡಿ ಠಾಣಾ ಪೊಲೀಸ್ ಸಬ್ ಇನ್‌ಸ್ಪೆಪೆಕ್ಟರ್ ಗುರುನಾಥ್ ಹಾದಿಮನಿ ಮಿಂಚಿನ ಕಾರ್ಯಾಚರಣೆ ನಡೆಸಿ ಒಂದು ಗಂಟೆಯೊಳಗೆ ಆರೋಪಿ ಬೈಕ್ ಸವಾರರಿಬ್ಬರನ್ನೂ ಪತ್ತೆ ಹಚ್ಚಿ ಬಂಧಿಸಿದರು. ಉಪ್ಪಿನಂಗಡಿ ಗ್ರಾಮದ ಮಠ ನಿವಾಸಿಗಳಾದ ಇಬ್ರಾಹಿಂ ಬ್ಯಾರಿ ಎಂಬವರ ಮಗ ಜುನೈದ್ (24) ಹಾಗೂ ಅಬ್ದುಲ್ ಲತೀಫ್ ಎಂಬವರ ಮಗ ಹಿಷಾಮ್ (18) ಎಂದು ಗುರುತಿಸಲಾಗಿದೆ. ಬಂಧಿತರ ವಿರುದ್ಧ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಸಾರ್ವಜನಿಕ ಶಾಂತಿ ಭಂಗ ಆರೋಪದಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  •  

Leave a Reply

error: Content is protected !!