

ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆಯಾಗಿ ಕಡಬದ ಹಿರಿಯ ಕಾಂಗ್ರೆಸ್ ನಾಯಕಿ ಉಷಾ ಅಂಚನ್ ಅವರು ನೇಮಕಗೊಂಡಿದ್ದಾರೆ. ಈ ಕುರಿತು ಜುಲೈ 24ರಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರ ಶಿಫಾರಸಿನ ಮೇರೆಗೆ, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಅವರು ಈ ಕುರಿತು ಈ ಮಹತ್ವದ ನೇಮಕ ಆದೇಶವನ್ನು ಹೊರಡಿಸಿದಾರೆ.
ಉಷಾ ಅಂಚನ್ ಅವರು ಸುಮಾರು ಮೂರು ದಶಕಗಳ ರಾಜಕೀಯ ಅನುಭವ ಹೊಂದಿರುವ ಶಕ್ತಿಶಾಲಿ ನಾಯಕಿಯಾಗಿದ್ದು, ಮಹಿಳಾ ಸಂಘಟನೆ, ಸಾಮಾಜಿಕ ಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಕಳೆದ ಎಂಟು ವರ್ಷಗಳ ಕಾಲ ಕಡಬ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ, ಎರಡು ಬಾರಿ ತಾಲೂಕು ಪಂಚಾಯತ್ ಸದಸ್ಯರಾಗಿ, ಹತ್ತು ವರ್ಷಗಳ ಕಾಲ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ, ರಾಜ್ಯ ಒಬಿಸಿ ಘಟಕದ ಕಾರ್ಯದರ್ಶಿಯಾಗಿ, ಜಿಲ್ಲಾ ಶಿಸ್ತು ಸಮಿತಿ ಸದಸ್ಯೆಯಾಗಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಸುಳ್ಯ ಕ್ಷೇತ್ರದ ಆರಾಧನಾ ಸಮಿತಿಯ ಸದಸ್ಯೆಯಾಗಿ, ಬ್ರಹ್ಮಶ್ರೀ ಹಾಗೂ ಪ್ರಿಯದರ್ಶಿನಿ ಸಹಕಾರ ಸಂಘಗಳ ನಿರ್ದೇಶಕಿಯಾಗಿ, ಮೂರ್ತೆದಾರರ ಬ್ಯಾಂಕ್ ಅಧ್ಯಕ್ಷೆಯಾಗಿ, ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಕಾಮಧೇನು ಮಹಿಳಾ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷೆಯಾಗಿ, ಬೆಳ್ತಂಗಡಿ ಕ್ಷೇತ್ರದ ಉಸ್ತುವಾರಿಯಾಗಿ, ಡಿಸಿಸಿ ಜನರಲ್ ಕಾರ್ಯದರ್ಶಿಯಾಗಿ, ಮೂರ್ತೆದಾರರ ಮಹಾಮಂಡಳಿ ಬಿ ಸಿ ರೋಡ್ ಇದರ ನಿರ್ದೇಶಕಿಯಾಗಿ, ಬಲ್ಯ ಗಣೇಶೋತ್ಸವ ಸಮಿತಿ ಕಾರ್ಯದರ್ಶಿಯಾಗಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಿರ್ದೇಶಕಿಯಾಗಿ, ನೆಲ್ಯಾಡಿ – ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಯ ಜೊತೆ ಕಾರ್ಯದರ್ಶಿಯಾಗಿ ಸೇರಿದಂತೆ ನೂರಾರು ಹುದ್ದೆಗಳಲ್ಲಿ ನಿರಂತರ ಸೇವೆ ಸಲ್ಲಿಸಿದ್ದಾರೆ.
ಇವರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಹಾದಿಯಲ್ಲಿ ಗಾಢ ನಡಿಗೆಯಿಟ್ಟ ಮಹಿಳಾ ನಾಯಕರಲ್ಲೊಬ್ಬರಾಗಿದ್ದು, ಇದೀಗ ಜಿಲ್ಲಾ ಮಟ್ಟದ ಮಹಿಳಾ ಕಾಂಗ್ರೆಸ್ ಘಟಕದ ನೇತೃತ್ವ ವಹಿಸಿಕೊಂಡಿರುವುದು ಪಕ್ಷದ ಮತ್ತು ಗ್ರಾಮೀಣ ಮಹಿಳಾ ಶಕ್ತಿ ಸಂಘಟನೆಗೆ ಹೊಸ ಹುಮ್ಮಸ್ಸು ನೀಡಲಿದೆ.










