

ನೆಲ್ಯಾಡಿ: ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾ ಸಂಸ್ಥೆಗಳಲ್ಲಿ 25ನೇ ಕಾರ್ಗಿಲ್ ವಿಜಯ ದಿನಾಚರಣೆಯನ್ನು ಆಚರಿಸಲಾಯಿತು.
1999ರ ಮೇ ನಿಂದ ಜುಲೈ 26 ರ ತನಕ ಭಾರತೀಯ ಪಡೆಗಳು ಮೆರೆದ ಕೆಚ್ಚೆದೆಯ ಹೋರಾಟದ ಫಲವಾಗಿ ದೇಶವು ಜಯಶಾಲಿಯಾಗಿತ್ತು. ಜಗತ್ತಿನ ಅತ್ಯಂತ ಎತ್ತರವಾದ ಯುದ್ಧ ಭೂಮಿಯಲ್ಲಿ ಹೋರಾಡಿ ಡ್ರಾಸ್, ಬಟಾಲಿಕ್ ಹಾಗೂ ಟೈಗರ್ ಹಿಲ್ಸ್ ಗಳನ್ನು ವಶಪಡಿಸಿಕೊಂಡ ವೀರ ಯೋಧರನ್ನು ಹಾಗೂ ಪರಮ ವೀರ ಚಕ್ರ ವಿಜೇತ ಮುಂಚೂಣಿಯ ಹೋರಾಟಗಾರರಾದ ಲೆ.ಜ. ಸಂಜಯ್ ಸಿಂಗ್, ಕ್ಯಾ.ವಿಕ್ರಂ ಭಾತ್ರ, ಲೆ.ಜ.ಮನೋಜ್ ಪಾಂಡೆ, ಗ್ರೇನೆಡಿಯರ್. ಯೋಗೇಂದ್ರ ಯಾದವ್ ಸೇರಿದಂತೆ ಹುತಾತ್ಮರಾದ 527 ಯೋಧರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಬಳಿಕ ವೀರ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಿಸುವ ಹಾಡುಗಳು, ನುಡಿನಮನ ಕಾರ್ಯಕ್ರಮಗಳು ಮೂಡಿ ಬಂದವು.

ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ ಐ.ತೋಮಸ್ ಅವರು ಮಾತನಾಡಿ ಯುದ್ಧ ಭೂಮಿಯಲ್ಲಿ ದೇಹಕ್ಕೆ ಗುಂಡುಗಳು ಹೊಕ್ಕಾಗಲೂ ಧೃತಿಗೆಡದೆ ಗುಂಡುಹಾರಿಸಿ ಶತ್ರುಗಳನ್ನು ಸಂಹರಿಸಿದ ಕ್ಯಾ.ವಿಕ್ರಂ ಭಾತ್ರ ಸೇರಿದಂತೆ ಭಾರತೀಯ ಕಡುಗಲಿಗಳ ಹೋರಾಟವನ್ನು ಸ್ಮರಿಸಿದರು. ಪ್ರಜೆಗಳ ನಿರಂತರ ಜಾಗೃತಿಯೇ ಸ್ವಾತಂತ್ರ್ಯಕ್ಕೆ ಸಲ್ಲಿಸುವ ಕೊಡುಗೆ. ಆದ್ದರಿಂದ ತಮ್ಮ ಜೀವದ ಹಂಗು ತೊರೆದು ದೇಶದ ರಕ್ಷಣೆ ಮಾಡುವ ಯೋಧರನ್ನು ಗೌರವಿಸಿ ಅವರ ಕುಟುಂಬಗಳಿಗೆ ಬೆಂಬಲವಾಗಿರೋಣ ಎಂದು ಕರೆ ನೀಡಿದರು.
ಎಲ್ಲಾ ಯೋಧರು ಹಾಗೂ ಸೈನಿಕರಿಗೆ ವಿದ್ಯರ್ಥಿಗಳು ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ರೆ.ಫಾ.ನೋಮಿಸ್ ಕುರಿಯಾಕೋಸ್, ಕಾರ್ಯದರ್ಶಿ ರೆ.ಫಾ.ಅನೀಶ್ ಪಾರಾಶೆರಿಲ್, ಪ್ರಾಂಶುಪಾಲರಾದ ಎಂ ಕೆ ಎಲಿಯಾಸ್, ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಹರಿಪ್ರಸಾದ್.ಕೆ ಉಪನ್ಯಾಸಕರು, ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂ ಡಿದ್ದರು. ಕಾಲೇಜು ವಿಭಾಗದ ಕಾರ್ಯಕ್ರಮ ಸಂಯೋಜಕರಾದ ಗೀತಾ.ಪಿ.ಬಿ ಕಾರ್ಯಕ್ರಮ ನಿರೂಪಿಸಿದರು.










