ಕೊಕ್ಕಡ: 33ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರ ಸಂಪನ್ನ

ಶೇರ್ ಮಾಡಿ

ಕೊಕ್ಕಡ: ಮಹಿಳಾ ಸಬಲೀಕರಣ ಹಾಗೂ ಸ್ವಾವಲಂಬನೆಗೆ ಉತ್ಸಾಹ ತುಂಬುವಂತೆ ಸೇವಾಭಾರತಿ (ರಿ.), ಕನ್ಯಾಡಿ ಇದರ ನೇತೃತ್ವದಲ್ಲಿ ನಡೆದ 33ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರವು ರಾಣೆಯರ್ ಸಭಾಭವನ, ತುಂಬೆತಡ್ಕದಲ್ಲಿ ಸಮಾರೋಪಗೊಂಡಿತು. ಸಬಲಿನಿ ಯೋಜನೆಯಡಿ, ಅರಸಿನಮಕ್ಕಿ ಗ್ರಾ.ಪಂ. ಹಾಗೂ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ಇದರ ಸಹಯೋಗದೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಅರಸಿನಮಕ್ಕಿ ಗ್ರಾ.ಪಂ. ಉಪಾಧ್ಯಕ್ಷರಾದ ಸುಧೀರ್ ಎಂ.ಎಸ್. ಅವರು ಮಾತನಾಡಿ, “ಟೈಲರಿಂಗ್ ಕಲಿತ ಮಹಿಳೆಯರಿಗೆ ವಿವಿಧ ಸ್ವ ಉದ್ಯೋಗ ಅವಕಾಶಗಳಿವೆ. ಈ ತರಬೇತಿಯನ್ನು ಅರ್ಧಕ್ಕೆ ನಿಲ್ಲಿಸದೇ ಮುಂದುವರಿಸಿಕೊಂಡು ಹೋಗಬೇಕು,” ಎಂದು ಶುಭ ಹಾರೈಸಿದರು.

ಸೇವಾಭಾರತಿ ಹಾಗೂ ಸೇವಾಧಾಮ ಸಂಸ್ಥೆಗಳ ಸ್ಥಾಪಕ ಕೆ.ವಿನಾಯಕ ರಾವ್ ಮಾತನಾಡಿ, “ಯಾವುದೇ ವಿದ್ಯೆಯೂ ಶಾಶ್ವತ. ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದುಳಿಯದೆ ಸ್ವಾಭಿಮಾನಿ ಜೀವನ ನಡೆಸುವುದು ಅಗತ್ಯ,” ಎಂದು ಹೇಳಿದರು.

ಟೈಲರಿಂಗ್ ತರಬೇತುದಾರ ಪ್ರತಿಮಾ ಅವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿ, ಸಂಸ್ಥೆಯ ವತಿಯಿಂದ ಸನ್ಮಾನಿಸಲ್ಪಟ್ಟರು. ಅರಸಿನಮಕ್ಕಿ ಸಹಕಾರಿ ಸಂಘದವರು ಗೌರವಧನ ನೀಡುವ ಮೂಲಕ ಗೌರವ ಸಲ್ಲಿಸಿದರು.ಈ ಸಂದರ್ಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದ 31 ಮಹಿಳಾ ತರಬೇತಿ ಪಡೆಯುವವರಿಗೆ ಪ್ರಮಾಣ ಪತ್ರ ವಿತರಣೆ ನಡೆಯಿತು.

ಅರಸಿನಮಕ್ಕಿ – ಶಿವಾನಿ ಸಂಜೀವಿನಿ ಮಹಿಳಾ ಒಕ್ಕೂಟದ ಮುಖಂಡ ನೀತಾ ರಾಧೇಶ್ ಆಚಾರ್ಯ ಅವರು ಸೇವಾಭಾರತಿಯೊಂದಿಗೆ ಕೈ ಜೋಡಿಸಿ, ಅರಸಿನಮಕ್ಕಿ, ನೆಲ್ಯಡ್ಕ ಹಾಗೂ ತುಂಬೆತಡ್ಕದ ಶಿಬಿರಗಳನ್ನೆಲ್ಲಾ ಯಶಸ್ವಿಯಾಗಿ ನಡೆಸಿದ್ದು, 91 ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ರೂಪಿಸಿರುವ ಶ್ಲಾಘನೀಯ ಸೇವೆಗೆ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕಿ ಬೇಬಿ, ಬೆಳ್ತಂಗಡಿ LIC ಡೆವಲಪ್‌ಮೆಂಟ್ ಆಫೀಸರ್ ಉದಯಶಂಕರ್ ಕೆ, ಗ್ರಾ.ಪಂ. ಸದಸ್ಯ ಪ್ರೇಮಚಂದ್ರ ಹಾಗೂ ನಿವೃತ್ತ ಯೋಧ ಕೆ.ಮಹಾಬಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವೇದಾವತಿ ಸ್ವಾಗತಿಸಿದರು, ಸುಮ ಕಾರ್ಯಕ್ರಮ ನಿರೂಪಿಸಿದರು, ಆಶಾ ವಂದಿಸಿದರು.

  •  

Leave a Reply

error: Content is protected !!