

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ನಿಷೇಧಿತ ಮತ್ಸ್ಯಮಾನ್ಯ ಪ್ರದೇಶದಲ್ಲಿ ರಾತ್ರಿ ಮೀನು ಹಿಡಿಯಲು ಯತ್ನಿಸಿದ ಇಬ್ಬರನ್ನು ಸ್ಥಳೀಯರು ಪತ್ತೆಹಚ್ಚಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ದೇವಳದ ಬಳಿ ಹರಿಯುವ ನದಿಯಲ್ಲಿ ‘ದೇವರ ಮೀನುಗಳಿದ್ದುದರಿಂದ ಈ ಪ್ರದೇಶದ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೀನು ಹಿಡಿಯದಂತೆ ಸರ್ಕಾರ ಸ್ಪಷ್ಟ ನಿಷೇಧ ಜಾರಿ ಮಾಡಿದೆ. ಆದರೂ, ಶುಕ್ರವಾರರಂದು ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಇಬ್ಬರು ಲೈಟ್ ಹಾಕಿ ನಿಷೇಧಿತ ಪ್ರದೇಶದಲ್ಲಿ ಮೀನು ಹಿಡಿಯಲು ಯತ್ನಿಸುತ್ತಿದ್ದ ವೇಳೆ, ಸ್ಥಳೀಯರು ತಕ್ಷಣವೇ ಶಂಕೆ ವ್ಯಕ್ತಪಡಿಸಿ ಅವರನ್ನು ಹಿಡಿದು ಪ್ರಶ್ನಿಸಿದ್ದಾರೆ.
ಬಂದಾರು, ಬಳಿಯ ಕುಪ್ಪೆಟ್ಟಿನ ನಿವಾಸಿ ಹಮೀದ್ ಮತ್ತು ಹಕೀಮ್ ಎಂಬವರು ಮೀನು ಹಿಡಿಯಲು ಬಂದವರೆಂದು ಒಪ್ಪಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ವಿಚಾರಿಸಿ ಎಚ್ಚರಿಕೆ ನೀಡಿ ಬಿಟ್ಟರೆಂದು ಸ್ಥಳೀಯರು ತಿಳಿಸಿದ್ದಾರೆ.










