

ಇಚ್ಲಂಪಾಡಿ: ಛತ್ತೀಸ್‌ಗಢದಲ್ಲಿ ಸುಳ್ಳು ಆರೋಪಗಳ ಆಧಾರದ ಮೇಲೆ ಬಂಧಿಸಲ್ಪಟ್ಟಿರುವ ಕ್ರಿಶ್ಚಿಯನ್ ಸನ್ಯಾಸಿನಿಯರಾದ ಸಿಸ್ಟರ್ ವಂದನಾ ಫ್ರಾನ್ಸಿಸ್ ಹಾಗೂ ಸಿಸ್ಟರ್ ಪ್ರೀತಿ ಮೇರಿ ಅವರನ್ನು ಬಿಡುಗಡೆಗೊಳಿಸಬೇಕು ಎಂಬ ಒತ್ತಾಯದೊಂದಿಗೆ ಇಚ್ಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ಟ್ರಸ್ಟ್ (ರಿ.) ವತಿಯಿಂದ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಡಬ ತಾಲೂಕು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಛತ್ತೀಸ್‌ಗಢ ಸರ್ಕಾರವು ಯಾವುದೇ ದೃಢವಾದ ಸಾಕ್ಷ್ಯಾಧಾರವಿಲ್ಲದೆ ಕ್ರಿಶ್ಚಿಯನ್ ಮಿಷನರಿ ಸನ್ಯಾಸಿನಿಯರನ್ನು ಬಂಧಿಸಿರುವುದನ್ನು ಟ್ರಸ್ಟ್ ಖಂಡಿಸಿದ್ದು, ಈ ಕ್ರಮವು ಭಾರತದ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸ್ವಾತಂತ್ರ್ಯ ಪೂರ್ವದಿಂದಲೇ ಕ್ರಿಶ್ಚಿಯನ್ ಸಮುದಾಯವು ಭಾರತದಲ್ಲಿ ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವೆಗಳ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದೆ. ಜನಾಂಗ, ಧರ್ಮ, ಜಾತಿ ಎಂದು ಬೇಧವಿಲ್ಲದೆ ಎಲ್ಲರಿಗೂ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸಿ ದೇಶದ ಬುನಾದಿಗೆ ಬೆಳಕು ಹರಡಿದವರು ಕ್ರಿಶ್ಚಿಯನ್ ಮಿಷನರಿಗಳಾಗಿದ್ದಾರೆ. ಈ ಹಿನ್ನಲೆಯಲ್ಲಿ ಇಂತಹ ಸಮುದಾಯದ ಮೇಲಿನ ದೌರ್ಜನ್ಯ ಖಂಡನಾರ್ಹವಾಗಿದೆ ಎಂಬುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಸ್ಟರ್ ವಂದನಾ ಫ್ರಾನ್ಸಿಸ್ ಮತ್ತು ಸಿಸ್ಟರ್ ಪ್ರೀತಿ ಮೇರಿ ಅವರನ್ನು ಮಾನವ ಕಳ್ಳಸಾಗಣೆ ಮತ್ತು ಧಾರ್ಮಿಕ ಮತಾಂತರದ ಸುಳ್ಳು ಆರೋಪದ ಮೇಲೆ ಬಂಧಿಸಲಾಗಿದೆ. ಈ ಇಬ್ಬರು ಸನ್ಯಾಸಿನಿಯರು ತಮ್ಮ ಪೋಷಕರ ಕಾನೂನುಬದ್ಧ ಒಪ್ಪಿಗೆಯೊಂದಿಗೆ ಮಹಿಳೆಯರನ್ನು ಮನೆಕೆಲಸಕ್ಕೆ ಕರೆದೊಯ್ದಿದ್ದರು ಎಂಬ ಸ್ಪಷ್ಟತೆಯ ಹೊರತಾಗಿಯೂ, ಕೇವಲ ವದಂತಿಗಳ ಆಧಾರದಲ್ಲಿ ಅವರನ್ನು ಬಂಧಿಸಲಾಗಿದೆ. ಈ ಹಿನ್ನೆಲೆ, ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳ ಸೇರಿದಂತೆ ಗುಂಪು ದೌರ್ಜನ್ಯ ನಡೆಸಿದವರ ವಿರುದ್ಧ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಟ್ರಸ್ಟ್‌ನ ಒತ್ತಾಯವಾಗಿದೆ.
ಅಲ್ಪಸಂಖ್ಯಾತರ ಸುರಕ್ಷತೆಗೆ ಒತ್ತಾಯ:
ಇತ್ತೀಚೆಗೆ ಕ್ರಿಶ್ಚಿಯನ್ ಸಮುದಾಯವು ದಬ್ಬಾಳಿಕೆಗೆ ಒಳಗಾಗುತ್ತಿರುವ ಕುರಿತು ಟ್ರಸ್ಟ್ ಗಂಭೀರ ಆತಂಕ ವ್ಯಕ್ತಪಡಿಸಿದೆ. ವಿವಿಧ ಧರ್ಮದ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ, ಗೌರವ ಹಾಗೂ ಸಂವಿಧಾನಬದ್ಧ ಹಕ್ಕುಗಳನ್ನು ಖಚಿತಪಡಿಸಬೇಕೆಂಬ ಕೋರಿಕೆಯೂ ಮನವಿಯಲ್ಲಿ ಸೇರಿಸಲಾಗಿದೆ.
ಈ ಸಂದರ್ಭದಲ್ಲಿ ನೂಜಿಬಾಳ್ತಿಲ ಬೆಥನಿ ಆಶ್ರಮದ ಫಾ.ಲಿಬಿನ್ ಓಐಸಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಿ.ಪಿ. ವರ್ಗೀಸ್, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷೆ ವಲ್ಸಮ್ಮ, ಇಚ್ಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ಸಂಘಟನೆಯ ಅಧ್ಯಕ್ಷ ಜೋನ್ಸನ್ ಮತ್ತು ಸಂಘದ ಸದಸ್ಯರು, ಹಾಗೂ ಕೌಕ್ರಾಡಿ ಗ್ರಾ.ಪಂ.ನ ಮಾಜಿ ಸದಸ್ಯ ವರ್ಗೀಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.










