

ನೆಲ್ಯಾಡಿ: 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನೆಲ್ಯಾಡಿ–ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ವತಿಯಿಂದ ನೆಲ್ಯಾಡಿಯ ಡಿಯೋನ ಸ್ಕ್ವೇರ್‌ನಲ್ಲಿ ಭವ್ಯ ಕಾರ್ಯಕ್ರಮ ಜರುಗಿತು.

ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್. ಧ್ವಜಾರೋಹಣ ನೆರವೇರಿಸಿ, ಸ್ವಾಗತಿಸಿ ಮಾತನಾಡಿದರು. ಸ್ವಾತಂತ್ರ್ಯೋತ್ಸವವು ಕೇವಲ ಆಚರಣೆಗಾಗಿ ಮಾತ್ರವಲ್ಲ, ತ್ಯಾಗಿಗಳ ಸ್ಮರಣೆಗಾಗಿ ಕೂಡಾ. ಇಂದಿನ ಯುವ ಪೀಳಿಗೆ ಸ್ವಾತಂತ್ರ್ಯದ ಬೆಲೆ ಅರಿತು, ದೇಶಾಭಿವೃದ್ಧಿಯಲ್ಲಿ ತಮ್ಮ ಪಾಲನ್ನು ಸಲ್ಲಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾದ ನಿವೃತ್ತ ಮುಖ್ಯಶಿಕ್ಷಕ ಶೀನಪ್ಪ ಎಸ್. ಮಾತನಾಡಿ, ಸ್ವಾತಂತ್ರ್ಯೋತ್ಸವ ನಮಗೆ ಹೆಮ್ಮೆ ತರುವ ದಿನ. ಈ ದಿನಕ್ಕಾಗಿ ಅನೇಕ ಮಹನೀಯರು ಅಸಾಧಾರಣ ಹೋರಾಟ ನಡೆಸಿ ತಮ್ಮ ಜೀವವನ್ನೇ ಬಲಿದಾನ ಮಾಡಿದ್ದಾರೆ. ಅವರ ತ್ಯಾಗದ ಫಲವೇ ಇಂದಿನ ನಮ್ಮ ಸ್ವಾತಂತ್ರ್ಯ. ನಾವು ಈ ಸ್ವಾತಂತ್ರ್ಯವನ್ನು ಕಾಪಾಡಿ, ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಮನದಟ್ಟು ಮಾಡಿದರು.
ನಿವೃತ್ತ ಕನ್ನಡ ಪಂಡಿತರಾದ ವಿ.ಆರ್. ಹೆಗ್ಡೆ ಮಾತನಾಡಿ, ಸ್ವಾತಂತ್ರ್ಯ ದೊರೆತ ನಂತರ ದೇಶವು ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆ ಕಂಡಿದೆ. ಇದಕ್ಕೆ ಕಾರಣಕರ್ತರಾದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಯುವಕರು ಇತಿಹಾಸವನ್ನು ಅರಿತು, ದೇಶದ ಭವಿಷ್ಯ ನಿರ್ಮಾಣಕ್ಕೆ ತಮ್ಮ ಶ್ರಮವನ್ನು ಅರ್ಪಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿಯ ಹಿರಿಯ ವರ್ತಕ ಹಾಗೂ ಹೋಟೆಲ್ ಸುಬ್ರಹ್ಮಣ್ಯ ವಿಳಾಸದ ಮಾಲಕ ಸುಬ್ರಹ್ಮಣ್ಯ ಆಚಾರ್‌ರನ್ನು ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ಪ್ರಾಚಾರ್ಯ ಫಾ.ಡಾ. ವರ್ಗೀಸ್ ಕೈಪನಡ್ಕ, ಸಂಘದ ಗೌರವಾಧ್ಯಕ್ಷ ರಫೀಕ್ ಸೀಗಲ್, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಉದಯ ಕುಮಾರ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ನಿರ್ದೇಶಕರಾದ ಸರ್ವೋತ್ತಮ ಗೌಡ, ಉಷಾ ಅಂಚನ್, ಕೌಕ್ರಾಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಇಬ್ರಾಹಿಂ ಎಂ.ಕೆ., ನೆಲ್ಯಾಡಿ ಪಿಎಂಶ್ರೀ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನಕರ, ನೋಟರಿ ವಕೀಲ ಇಸ್ಮಾಯಿಲ್, ನಿವೃತ್ತ ದೈಹಿಕ ಶಿಕ್ಷಕ ಜನಾರ್ದನ ಟಿ., ಶ್ರೀಧರ ಗೋರೆ ಹಾಗೂ ವರ್ತಕ ಸಂಘದ ಪದಾಧಿಕಾರಿಗಳು, ವರ್ತಕರು ಉಪಸ್ಥಿತರಿದ್ದರು.
ನಿವೃತ್ತ ಮುಖ್ಯಶಿಕ್ಷಕ ವೆಂಕಟರಮಣ ಆರ್. ಕಾರ್ಯಕ್ರಮ ನಿರೂಪಿಸಿದರು, ಗಣೇಶ್ ರಶ್ಮಿ ವಂದಿಸಿದರು.











