ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ – 53 ಮಂದಿ ಮಾಜಿ ಸೈನಿಕರ ಪಥಸಂಚಲನ ಆಕರ್ಷಣೆ

ಶೇರ್ ಮಾಡಿ

ನೆಲ್ಯಾಡಿ: 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ಭವ್ಯ ಕಾರ್ಯಕ್ರಮ ಜರುಗಿತು. ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್ ಅವರು ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸಿ ಎಲ್ಲರಿಗೂ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಡಬ ತಾಲೂಕಿನ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಸುಮಾರು 53 ಮಂದಿ ಮಾಜಿ ಸೈನಿಕರು ಭಾಗವಹಿಸಿ ಪಥಸಂಚಲನ ನಡೆಸಿದರು. ಪಥಸಂಚಲನದ ಶಿಸ್ತು, ಉತ್ಸಾಹ ಮತ್ತು ದೇಶಭಕ್ತಿ ವಿದ್ಯಾರ್ಥಿಗಳಿಗೆ ವಿಶೇಷ ಪ್ರೇರಣೆಯಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ಮಾಜಿ ಸೈನಿಕ ಮ್ಯಾಥ್ಯು ಟಿ.ಜೆ ಅವರು ತಮ್ಮ ಸೈನಿಕ ಜೀವನದ ಅನುಭವಗಳನ್ನು ಹಂಚಿಕೊಂಡು, “ಸಕಲ ಜೀವಿಗಳಿಗೆ ಮುಖ್ಯವಾದದ್ದು ಜೀವನ ಆದರೆ ಸೈನಿಕನಿಗೆ ದೇಶವೇ ಮೊದಲ ಆದ್ಯತೆ. ದೇಶಕ್ಕಾಗಿ ಬಲಿದಾನ ಮಾಡುವುದು ಸುಲಭದ ಕೆಲಸವಲ್ಲ” ಎಂದು ಹೇಳಿದರು. ಅವರು ದೇಶಕ್ಕಾಗಿ ಹೋರಾಡಿದ ಮಹಾನ್ ವೀರರನ್ನು ಸ್ಮರಿಸಿ 79ನೇ ಸ್ವಾತಂತ್ರ್ಯೋತ್ಸವ ಎಲ್ಲರಿಗೂ ಒಳಿತಾಗಲಿ ಎಂದು ಶುಭ ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯ ಫಾ.ಡಾ.ವರ್ಗೀಸ್ ಕೈಪನಡ್ಕ ವಹಿಸಿ ಮಾತನಾಡಿದ ಅವರು, “ಸ್ವಾತಂತ್ರ್ಯ ನಮಗೆ ಉಡುಗೊರೆ ಅಲ್ಲ, ಅದು ಹೋರಾಟದ ಫಲ. ಅದನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ” ಎಂದು ಹೇಳಿದರು. ಮಾಜಿ ಸೈನಿಕರ ಪಥಸಂಚಲನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಫಾ. ಜೈಸನ್ ಸೈಮನ್ ಒಐಸಿ, ಫಾ.ಸ್ಯಾಮುವೇಲ್ ಒಐಸಿ, ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷ ಸನ್ನಿ ಕೆ.ಎಸ್., ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸೆಬಾಸ್ಟಿನ್.ಕೆ.ಕೆ., ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್., ಗ್ರಾ.ಪಂ. ಸದಸ್ಯೆ ಉಷಾ ಜೋಯಿ, ಉಪಪ್ರಾಚಾರ್ಯ ಜೋಸ್ ಎಂ.ಜೆ., ಕಾಲೇಜಿನ ನಾಯಕ ಜೋಯಲ್ ಎಂ.ಜೆ. ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ 53 ಮಂದಿ ಮಾಜಿ ಸೈನಿಕರಿಗೆ ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಜೋಸ್ ಪ್ರಕಾಶ್ ಸ್ವಾಗತಿಸಿ, ವಿದ್ಯಾರ್ಥಿಗಳಾದ ಶರಿನ್ ಮತ್ತು ಸಹನ ನಿರೂಪಿಸಿದರು. ಮುಖ್ಯಶಿಕ್ಷಕ ಜಾರ್ಜ್ ಕೆ.ತೋಮಸ್ ವಂದಿಸಿದರು.

ಸಭೆಯ ನಂತರ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು, ಉಪನ್ಯಾಸಕರು, ಶಿಕ್ಷಕರು, ಕಚೇರಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

  •  

Leave a Reply

error: Content is protected !!