

ಕೊಕ್ಕಡ: ಗುಲಾಮಗಿರಿ, ಶೋಷಣೆ, ಲೂಟಿ, ಮೋಸ, ವಂಚನೆ ತುಂಬಿದ ಕಾಲದಲ್ಲಿ ಪ್ರಜಾಪ್ರಭುತ್ವದ ಹೋರಾಟಗಳಿಂದಲೇ ನ್ಯಾಯ ಸಾಧ್ಯ ಎಂಬುದಕ್ಕೆ ಭಾರತದ ಸ್ವಾತಂತ್ರ್ಯ ಹೋರಾಟವೇ ಸಾಕ್ಷಿ. ಹೀಗಾಗಿ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಮೈಗೂಡಿಸಿಕೊಂಡು ಸ್ವತಂತ್ರ ಭಾರತವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ. ಭಟ್ ಹೇಳಿದರು.
ಪಟ್ರಮೆ ಮಸೀದಿಯಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 1920ರಲ್ಲಿ ಪೂರ್ಣ ಸ್ವರಾಜ್ಯದ ನಿರ್ಣಯ ಮಂಡಿಸಿದ ಕಮ್ಯೂನಿಸ್ಟ್ ನಾಯಕ ಹಸ್ರತ್ ಮೊಹರಾನಿ, ಅದನ್ನು ಅನುಮೋದಿಸಿದ ಸ್ವಾಮಿ ಕುಮಾರನಂದ ಅವರ ಕನಸಿನ ಭಾರತ, ಮಹಾತ್ಮಾ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮೊದಲಾದವರ ಹೋರಾಟಗಳಿಂದ ರೂಪುಗೊಂಡ ಸ್ವಾತಂತ್ರ ಭಾರತ – ಇವುಗಳೆಲ್ಲ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಆಧಾರದ ಮೇಲೆ ಪ್ರಜೆಗಳೇ ಆಳುವ ರಾಷ್ಟ್ರವನ್ನಾಗಿ ಬೆಳೆದ ದಿನವನ್ನು ನಾವು ಇಂದು ಸ್ಮರಿಸುತ್ತಿದ್ದೇವೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತೆ ಪಾಳೆಗಾರರ ಕೈಗೆ, ಬಂಡವಾಳಶಾಹಿಗಳ ಸರ್ವಾಧಿಕಾರದ ಹಸ್ತಕ್ಕೆ ಬಂದನವಾಗದಂತೆ ಎಚ್ಚರಿಕೆಯಿಂದ ಇರಬೇಕು. ‘ಒಡೆದು ಆಳುವ’ ಮನೋಭಾವದವರನ್ನು ತಳ್ಳಿಹಾಕಲು ಈ ದಿನ ಪ್ರೇರಣೆ ಆಗಲಿ. ನಮ್ಮ ಮೌನವೇ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ ಎಂಬ ಪ್ರಜ್ಞೆ ಸದಾ ನಮ್ಮಲ್ಲಿ ಇರಬೇಕು. ಹೋರಾಟದ ಮೂಲಕ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಿ, ಬಹುಸಾಂಸ್ಕೃತಿಕ ಭಾರತವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಜವಾಬ್ದಾರಿ ಎಂದು ಭಟ್ ಹೇಳಿದರು.
ಮಸೀದಿಯ ಗುರುಗಳು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರೈತ ಮುಖಂಡರಾದ ಶ್ಯಾಮರಾಜ್, ಮಹಮ್ಮದ್ ಅನಸ್, ಮಸೀದಿಯ ಅಧ್ಯಕ್ಷ ಹನೀಫ್, ಕಾರ್ಯದರ್ಶಿ ಅನ್ಸಪ್, ಖಜಾಂಜಿ ನಾಸಿರ್, ಹಿರಿಯರಾದ ಉಸ್ಮಾನ್, ಯೂಸುಫ್ ಹಾಗೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.











