

ಕೊಕ್ಕಡ: ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ತ್ಯಾಗಿಗಳು, ಹುತಾತ್ಮರು, ಹೋರಾಟಗಾರರನ್ನು ಗೌರವಿಸಬೇಕಾದ ದೇಶದಲ್ಲಿ, ಮಹಾತ್ಮಾ ಗಾಂಧೀಜಿಯವರನ್ನು ಕೊಂದ ಕೊಲೆಗಾರನ ಪೂಜಿಸುವ ಜನರಿಂದ ಭಾರತೀಯರು ದೂರವಿರಬೇಕು. ದೇಶ ರಕ್ಷಣೆಗೆ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಕಾಪಾಡಲು ನಾವು ಬದ್ಧರಾಗಬೇಕು ಎಂದು ದ.ಕ. ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಸಂಘದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಧನಂಜಯ ಹೇಳಿದರು.
ಪಟ್ರಮೆಯ ಅಂಬೇಡ್ಕರ್ ಭವನದಲ್ಲಿ ದಲಿತ ಹಾಗೂ ಕಾರ್ಮಿಕ ಸಂಘಟನೆಗಳ ಸಂಯೋಜನೆಯಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಸಾಕಾರಗೊಳಿಸಲು ಬದ್ಧತೆಯಿಂದ ದುಡಿಯಬೇಕು. ಭಗತ್ ಸಿಂಗ್ ಅವರ ತ್ಯಾಗವನ್ನು ಗೌರವಿಸಬೇಕು. ಬಹುತ್ವ ಭಾರತವನ್ನು ರಕ್ಷಿಸಿ, ಸಂವಿಧಾನವನ್ನು ಎತ್ತಿಹಿಡಿದು, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ಜಾರಿಗೊಳಿಸಬೇಕು ಎಂದು ಕರೆ ನೀಡಿದರು.
ಡಿ.ವೈ.ಎಫ್.ಐ. ಜಿಲ್ಲಾ ಸಮಿತಿ ಸದಸ್ಯ ಜಯಂತ ಪಾದೆಜಾಲು ಮಾತನಾಡಿ, ಸ್ವಾತಂತ್ರ್ಯೋತ್ಸವದ ಮಹತ್ವವನ್ನು ನೆನಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಊರಿನ ಹಿರಿಯ ಉಸ್ಮಾನ್ ದ್ವಜಾರೋಹಣ ನೆರವೇರಿಸಿದರು.
ಎಸ್.ಎಫ್.ಐ. ಜಿಲ್ಲಾ ಕಾರ್ಯದರ್ಶಿ ವಿನುಶ್ ರಮಣ ಸ್ವಾಗತಿಸಿ, ವಂದಿಸಿದರು. ಸಿಪಿಐಎಂ ಮುಖಂಡ ಶ್ಯಾಮರಾಜ್ ಪಟ್ರಮೆ, ಮಹಮ್ಮದ್ ಅನಸ್, ವಸಂತ ಟೈಲರ್, ಅಣ್ಣು, ದೊಲ್ಲ ಗೌಡ, ಚೋಮ, ಹನೀಫ್ ಸೇರಿದಂತೆ ಹಲವು ಸಂಘಟಕರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.











