

ನೆಲ್ಯಾಡಿ: ಕರ್ನಾಟಕ ರಸ್ತೆ ಸಾರಿಗೆ ನಿಗಮ ಪುತ್ತೂರು ಘಟಕದ ವತಿಯಿಂದ ಸುಬ್ರಹ್ಮಣ್ಯ – ಕಡಬ – ಬಲ್ಯ ಮಾರ್ಗವಾಗಿ ರಾಮನಗರ – ನೆಲ್ಯಾಡಿ – ಉಪ್ಪಿನಂಗಡಿ – ಪುತ್ತೂರಿಗೆ ನೂತನ ಬಸ್ಸು ಸಂಚಾರಕ್ಕೆ ಶುಕ್ರವಾರದಂದು ಬೆಳಿಗ್ಗೆ ನೂತನ ಬಸ್ಸಿಗೆ ಹೂವಿನ ಹಾರ ಹಾಕಿ, ಚಾಲಕ-ನಿರ್ವಾಹಕರಿಗೆ ಶಾಲು ಹಾಕಿ, ಗುಲಾಬಿ ಹೂವು ನೀಡುವ ಮೂಲಕ ಭರ್ಜರಿ ಸ್ವಾಗತ ನೀಡಲಾಯಿತು. ಗ್ರಾಮಸ್ಥರು ಹೊಸ ಬಸ್‌ಗಾಗಿ ಸಂತೋಷ ವ್ಯಕ್ತಪಡಿಸಿದರು.

ಈ ಬಸ್ ಸಂಚಾರವು ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಪುತ್ತೂರು–ಉಪ್ಪಿನಂಗಡಿಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ನೌಕರರಿಗೆ ವಿಶೇಷ ಅನುಕೂಲವಾಗಲಿದೆ. ಬೆಳಿಗ್ಗೆ 7.15ಕ್ಕೆ ಸುಬ್ರಹ್ಮಣ್ಯದಿಂದ ಹೊರಟು, 8.30ಕ್ಕೆ ನೆಲ್ಯಾಡಿ, 9.00ಕ್ಕೆ ಉಪ್ಪಿನಂಗಡಿ, ಹಾಗೂ 9.30ಕ್ಕೆ ಪುತ್ತೂರಿಗೆ ಈ ಬಸ್ ತಲುಪುವಂತೆಯೂ ವೇಳಾಪಟ್ಟಿ ರೂಪಿಸಲಾಗಿದೆ.
ಪುತ್ತೂರು ಘಟಕದ ಸಹಾಯಕ ವಿಭಾಗಾಧಿಕಾರಿ ಜೈ ಶಂಕರ್ ಅವರ ಮುತುವರ್ಜಿಯ ಜೊತೆಗೆ, ಕಡಬ ತಾಲೂಕು ಪಂಚಾಯಿತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರ ಸಹಕಾರ, ರಾಮನಗರ ಗ್ರಾಮಸ್ಥರ ಅವಿರತ ಶ್ರಮ ಹಾಗೂ ತಾಲೂಕು ಪಂಚಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಸಹಕಾರ ಪ್ರಮುಖ ಕಾರಣವಾಗಿದೆ.
ತಾಲೂಕು ಪಂಚಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಹಾಗೂ ನೆಲ್ಯಾಡಿ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಧಾರ್ಮಿಕ ಮುಂದಾಳು ಬಿ. ರುಕ್ಕು, ಶ್ರೀ ರಾಜನ್ ದೈವ ಸೇವಾ ಟ್ರಸ್ಟ್ ಅಧ್ಯಕ್ಷ ಧನಂಜಯ ಕೊಡಂಗೆ, ಶ್ರೀ ವಿನಾಯಕ ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ರೈ ರಾಮನಗರ, ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಕಾರ್ಯದರ್ಶಿ ಕಿರಣ್ ಪುತ್ತಿಲ, ಉಮಾ ಮಹೇಶ್ವರಿ ದೇವಸ್ಥಾನ ಉತ್ಸವ ಸಮಿತಿಯ ಅಧ್ಯಕ್ಷ ಜಗನ್ನಾಥ ರೈ ಗುತ್ತು, ಹಿರಿಯ ಯಕ್ಷಗಾನ ಕಲಾವಿದ ವಿಠಲ ಮಾರ್ಲ, ಶಿವರಾಮ ರೈ ಗುತ್ತು, ದಿನಕರ ಗೌಡ ನಾಲ್ಗೊತ್ತು, ಜಗದೀಶ್ ಮಾರ್ಲ, ನಿತಿನ್ ಮಾರ್ಲ, ಸುರೇಖಾ ಡಿ. ಮಾರ್ಲ ಸೇರಿದಂತೆ ಹಲವಾರು ಗಣ್ಯರು, ಶಾಲಾ ವಿದ್ಯಾರ್ಥಿಗಳ ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿದರು. ಧನಂಜಯ ಕೊಡಂಗೆ ಬಸ್ ಸಂಚಾರಕ್ಕಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.











