

ನೆಲ್ಯಾಡಿ: ಖೋಟಾನೋಟು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಉಪ್ಪಿನಂಗಡಿ ಬಳಿಯ ವಳಾಲು ಎಂಬಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೂಲತ: ಬಂಟ್ವಾಳ ತಾಲೂಕಿನ ಬಿ.ಸಿ.ರೋಡು ಜೋಡುಮಾರ್ಗ ತಲಪಾಡಿ ಹೌಸ್ ನಿಜಾಮ್ ಮಂಝಿಲ್ ನಿವಾಸಿ ಮೊಹಮ್ಮದ್ ಕೆ.ಎ.ಎಂಬವರ ಪುತ್ರ ನಿಜಾಮುದ್ದೀನ್ ಅಲಿಯಾಸ್ ನಿಜಾಮ್(33ವ.)ಬಂಧಿತ ಆರೋಪಿಯಾಗಿದ್ದಾನೆ.
ಈತ ಪ್ರಸ್ತುತ ಬಜತ್ತೂರು ಗ್ರಾಮದ ವಳಾಲುನಲ್ಲಿ ಮದರಸ ಹತ್ತಿರ ದಾವೂದ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈತನ ವಿರುದ್ಧ ಖೋಟಾನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿ 2023ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದ ನಂತರ ಈತ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಈತನ ಮೇಲೆ 8 ಸಲ ಬಂಧನ ವಾರಂಟ್ ಹೊರಡಿಸಿತ್ತು. ಈತನ ಪತ್ತೆ ಕಾರ್ಯಾಚರಣೆ ಕೈಗೊಂಡ ಮಂಗಳೂರು ಪೂರ್ವ ಪೊಲೀಸ್ ಠಾಣಾ ಅಪರಾಧ ಹಾಗೂ ವಾರಂಟ್ ಜಾರಿ ವಿಭಾಗದ ಸಿಬ್ಬಂದಿಗಳು ಆ.25ರಂದು ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಬಳಿಯ ವಳಾಲುನಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯದ ಜಾಮೀನು ಷರತ್ತು ಉಲ್ಲಂಘಿಸಿದ ಆರೋಪದಲ್ಲಿ ಆಪಾದಿತನ ವಿರುದ್ಧ ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣಗಳು
ಪೊಲೀಸ್ ಇಲಾಖೆಯ ಪ್ರಕಾರ ನಿಜಾಮುದ್ದೀನ್ ವಿರುದ್ಧ ಜಿಲ್ಲೆಯ ಹಲವು ಠಾಣೆಗಳಲ್ಲಿ ಪ್ರಕರಣಗಳಿವೆ. ಮಂಗಳೂರು ಪೂರ್ವ ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿದೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಉದ್ಘೋಷಣೆ ಹೊರಡಿಸಿದೆ.ಕುಶಾಲನಗರ ಗ್ರಾಮಾಂತರ, ಮಂಗಳೂರು ಬರ್ಕೆ ಹಾಗೂ ಪುತ್ತೂರು ನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವು ಖುಲಾಸೆಯಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.











