

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಕಡಬ ವಲಯ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ಇವುಗಳ ಆಶ್ರಯದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ, ಕಡಬದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ವಲಯದ ಅಧ್ಯಕ್ಷರಾದ ಕರುಣಾಕರ ಗೋಗಟೆ ಮಾತನಾಡಿ – “ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮುಖಾಂತರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಅಭಿನಂದನೀಯ” ಎಂದು ಶ್ಲಾಘಿಸಿದರು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ ಶಾಲೆಯ ಉಪಪ್ರಾಂಶುಪಾಲೆ ಡಾ.ಶ್ರೀಮತಿ ವೇದಾವತಿ ಅವರು, “ಶ್ರೀ ಕ್ಷೇತ್ರದಿಂದ ಶಾಲೆಗೆ ಅನುದಾನ, ಕಳೆದ ವರ್ಷ ಒದಗಿಸಿದ ಬೆಂಚ್-ಡೆಸ್ಕ್‌ಗಳು ಹಾಗೂ ಈಗ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮವು ಡಾ.ಹೆಗ್ಗಡೆ ಅವರ ಸಾಮಾಜಿಕ ಕಳಕಳಿಯ ನಿದರ್ಶನ” ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಗಣೇಶ್ ಕೈಕುರೆ ಅವರು, “ಮಾದಕ ವಸ್ತುಗಳು ಹಾಗೂ ದುಶ್ಚಟಗಳಿಂದ ಉಂಟಾಗುವ ಹಾನಿ ಅಳತೆಗೂ ಮೀರಿದೆ. ಉತ್ತಮ ಶಿಕ್ಷಣ ಪಡೆದವರೂ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದುರದೃಷ್ಟಕರ. ಶಿಕ್ಷಣ ಪಡೆದವರು ಆದರ್ಶಪ್ರಾಯವಾಗಿ ಬದುಕಿದಾಗ ಮಾತ್ರ ಶಿಕ್ಷಣಕ್ಕೆ ಅರ್ಥ ಬರುತ್ತದೆ” ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಸಭೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯೆ ಸರೋಜಿನಿ ಆಚಾರ್ಯ, ಪೋಷಕರ ಸಂಘದ ಸದಸ್ಯೆ ಕುಸುಮಾವತಿ, ಶಾಲೆಯ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕ ವಿಜೇಶ್ ಜೈನ್ ಸ್ವಾಗತಿಸಿ ಪ್ರಾಸ್ತಾವಿಕ ನೀಡಿದರು. ಸೇವಾ ಪ್ರತಿನಿಧಿ ಶ್ರೀಮತಿ ಸವಿತಾ ವಂದಿಸಿದರು. ನಲಿನಿ ಕಾರ್ಯಕ್ರಮವನ್ನು ನಿರ್ವಹಿಸಿದರು.











