
ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಕುಖ್ಯಾತ ಸಾಗಾಟಗಾರನನ್ನು ಸಿಸಿಬಿ ಪೊಲೀಸರು ಬಲೆ ಬೀಸಿ ಬಂಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು ನಗರದಿಂದ ಎಂಡಿಎಂಎ, ಹೈಡ್ರೋವಿಡ್ ಗಾಂಜಾ ಹಾಗೂ ಎಂಡಿಎಂಎ ಪಿಲ್ಸ್ ಖರೀದಿಸಿಕೊಂಡು ಮಂಗಳೂರಿನ ದೇರಳಕಟ್ಟೆ ಪರಿಸರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು ಆ. 29ರಂದು ದಾಳಿ ನಡೆಸಿ 53.29 ಗ್ರಾಂ ಎಂಡಿಎಂಎ, 2.33 ಗ್ರಾಂ ಹೈಡ್ರೋವೀಡ್ ಗಾಂಜಾ ಹಾಗೂ 0.45 ಗ್ರಾಂ ಎಂಡಿಎಂಎ ಪಿಲ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಮೊಹಮ್ಮದ್ ಅರ್ಶದ್ ಖಾನ್ (29), ನಝೀರ್ ಅಹಮದ್ ಖಾನ್ ಪುತ್ರ, ಮೂಲತಃ ಕೇರಳದ ಎರ್ನಾಕುಳಂ ಜಿಲ್ಲೆಯ ಕೊಚ್ಚಿ ಮೂಲಾನಾ ಆಜಾದ್ ರಸ್ತೆ ನಿವಾಸಿ, ಪ್ರಸ್ತುತ ಮಂಗಳೂರು ದೇರಳಕಟ್ಟೆ ಲಿಯೋ ಬ್ಲಾಕ್, ಬೆರ್ರೀಸ್ ಅಪಾರ್ಟ್‌ಮೆಂಟ್ ವಾಸಿ ಎಂದು ಗುರುತಿಸಲಾಗಿದೆ.
ಆತನ ವಶದಿಂದ ಒಟ್ಟು ರೂ. 11,05,500/- ಮೌಲ್ಯದ ಮಾದಕ ವಸ್ತುಗಳು, ಡಿಜಿಟಲ್ ತೂಕ ಮಾಪಕ ಹಾಗೂ ಮೊಬೈಲ್ ಫೋನ್ ಸಹಿತ ವಸ್ತುಗಳನ್ನು ಸಿಸಿಬಿ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಮಾದಕ ವಸ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆ ಕಾರ್ಯ ಸಿಸಿಬಿ ಪೊಲೀಸರು ಮುಂದುವರಿಸಿಕೊಂಡಿದ್ದಾರೆ.










