

ನೆಲ್ಯಾಡಿ: ಜೇಸಿಐ ನೆಲ್ಯಾಡಿ, ಮಹಿಳಾ ಜೇಸಿಐ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇವರ ಆಶ್ರಯದಲ್ಲಿ 42ನೇ ವರ್ಷದ ಜೇಸಿ ಸಪ್ತಾಹ – 2025 ‘ಸಪ್ತ ಸಂಭ್ರಮ’ ಕಾರ್ಯಕ್ರಮಕ್ಕೆ ಮಂಗಳವಾರ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಭವ್ಯ ಉದ್ಘಾಟನೆಯು ನೆರವೇರಿತು.

ಕಾರ್ಯಕ್ರಮದ ಉದ್ಘಾಟಕರಾದ ಜೇಸಿಐ ಭಾರತದ ವಲಯ ಸಂಯೋಜಕರಾದ ಜಿತೇಶ್ ಪಿರೇರಾ ಅವರು ಜೇಸಿ ಧ್ವಜಾರೋಹಣ ನೆರವೇರಿಸಿ ಸಪ್ತಾಹಕ್ಕೆ ಚಾಲನೆ ನೀಡಿದರು. ಬಳಿಕ ನೆಲ್ಯಾಡಿ ಸೈಂಟ್ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗಾಗಿ ‘ಸ್ವಾಸ್ಥ್ಯ ಸಂಕಲ್ಪ’ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು, ಸಂತ ಜಾರ್ಜ್ ಪಿಯು ಕಾಲೇಜಿನ ಪ್ರಾಚಾರ್ಯ ಎಲಿಯಾಸ್ ಎಂ.ಕೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸದಸ್ಯ ರಾಕೇಶ್ ರೈ ಕೆಡೆಂಜೆ ಗುತ್ತು ಅವರು ಆಗಮಿಸಿದರು.
ಸಂಜೆ ವೇಳೆಗೆ ಕೊಪ್ಪ ಪ್ರಶಾಂತ್ ನಿವಾಸದಲ್ಲಿ ವಾಕಥಾನ್ ಕಾರ್ಯಕ್ರಮ ಮತ್ತು ಆಶ್ರಮ ಭೇಟಿ ನೀಡಿ ಆಶ್ರಮ ವಾಸಿಗಳಿಗೆ ಹಣ್ಣು ಹಂಪಲು ಹಾಗೂ ಊಟವನ್ನು ನೀಡಿ ಸಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಜಿತೇಶ್ ಪಿರೇರಾ ಮಾತನಾಡಿ ನೆಲ್ಯಾಡಿ ಜೇಸಿಐ ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಲಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. 42ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಸಮಾಜಕ್ಕೆ ಹಲವು ಉತ್ತಮ ನಾಯಕರನ್ನು ನೀಡಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು ಹಾಗೂ ಸಪ್ತಾಹಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ನೆಲ್ಯಾಡಿ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ವಹಿಸಿ ಸ್ವಾಗತಿಸಿದರು. ವೇದಿಕೆಯಲ್ಲಿ ಕೊಪ್ಪ ಪ್ರಶಾಂತ ನಿಲಯ ಮೇಲ್ವಿಚಾರಕಿ ಸಿಸ್ಟರ್ ಜೆಸ್ಸಿ ಜೋಸೆಫ್, ನೆಲ್ಯಾಡಿ ಅಶ್ವಮೇಧ ಕೆಟರರ್ಸ್ ಮಾಲಕ ರತ್ನಾಕರ ಶೆಟ್ಟಿ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ ಅಧ್ಯಕ್ಷ ಪ್ರಕಾಶ್ ಕೆ. ವೈ., ನೆಲ್ಯಾಡಿ ಜೇಸಿಐನ ನಿಕಟಪೂರ್ವ ಅಧ್ಯಕ್ಷೆ ಸುಚಿತ್ರ ಜೆ ಬಂಟ್ರಿಯಾಲ್, ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ವಿನ್ಯಾಸ್ ಬಂಟ್ರಿಯಾಲ್, ಪುರಂದರ ರೈ, ಮಹಿಳಾ ಜೇಸಿ ಅಧ್ಯಕ್ಷೆ ಪ್ರವೀಣಿ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.
ಲೀಲಾ ಮೋಹನ್ ಜೇಸಿವಾಣಿ ವಾಚಿಸಿದರು. ಜಯಾನಂದ ಬಂಟ್ರಿಯಾಲ್ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ನವ್ಯ ಪ್ರಸಾದ್ ವಂದಿಸಿದರು.






