

ಕೊಕ್ಕಡ: ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ.19ರಂದು ಸಂಘದ ಆವರಣದಲ್ಲಿ ಭಾವೈಕ್ಯತೆಯಿಂದ ನಡೆಯಿತು. ಸಂಘವು ಒಟ್ಟು 180 ಸದಸ್ಯರನ್ನು ಹೊಂದಿದ್ದು, ಕಳೆದ ಸಾಲಿನಲ್ಲಿ 1,91,973 ಲೀಟರ್ ಹಾಲನ್ನು ಸಂಗ್ರಹಿಸಿ ₹69,67,535 ಮೌಲ್ಯದ ವ್ಯವಹಾರ ನಡೆಸಿದೆ. ಈ ಅವಧಿಯಲ್ಲಿ ಸಂಘವು ₹1,26,535.01 ನಿವ್ವಳ ಲಾಭ ಗಳಿಸಿದೆ.
ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷೆ ಶ್ವೇತಾ ಎಚ್.ಕೆ. ಮಾತನಾಡಿ, ಸಂಘವು ಹತ್ತು ವರ್ಷಗಳ ಹಿಂದೆ ದಿನಕ್ಕೆ ಕೇವಲ 50 ಲೀಟರ್ ಹಾಲಿನಿಂದ ಆರಂಭಗೊಂಡು ಇಂದು ದಿನಕ್ಕೆ 850 ಲೀಟರ್ ಹಾಲು ಸಂಗ್ರಹಿಸುತ್ತಿದೆ. ಸಂಘವು ಸ್ವಂತ ಕಟ್ಟಡವನ್ನು ಹೊಂದಿದ್ದು, ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿದೆ. ಒಕ್ಕೂಟದ ಅಧಿಕಾರಿಗಳು, ಆಡಳಿತ ಮಂಡಳಿ, ಸಿಬ್ಬಂದಿ, ಸದಸ್ಯರು ಹಾಗೂ ಊರವರ ಸಹಕಾರದಿಂದ ಸಂಘವು ಇಂದು ಉತ್ತಮ ಬೆಳವಣಿಗೆ ಸಾಧಿಸಿದೆ ಎಂದು ಹೇಳಿದರು.
ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಪ್ರಸಾದ್ ಕಾಮತ್ ಅವರು ಮಾತನಾಡಿ, ಪಶುಗಳ ಆರೋಗ್ಯ, ಪಶು ಆಹಾರದ ಸದ್ಬಳಕೆ ಹಾಗೂ ಒಕ್ಕೂಟದಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ರೈತರು ಪಶುಪಾಲನೆಯತ್ತ ಹೆಚ್ಚಿನ ಗಮನಹರಿಸಿ ಹಾಲಿನ ಪೂರೈಕೆಯನ್ನು ಹೆಚ್ಚಿಸುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಹೇಮಾವತಿ, ನಿರ್ದೇಶಕರು ದಿವ್ಯ, ಜಯಂತಿ, ಸುಂದರಿ ಎ, ಅಕ್ಷತಾ, ಚಂದ್ರಾವತಿ, ಕುಸುಮ, ಶೀಲ, ರೋಸ್ಲಿನ್, ಶೋಭ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘಕ್ಕೆ ಹೆಚ್ಚು ಹಾಲು ಪೂರೈಸಿದ ಸದಸ್ಯರನ್ನು ಹಾಗೂ ವರ್ಷಪೂರ್ತಿ ಹಾಲು ಪೂರೈಕೆ ಮಾಡಿದ ಸದಸ್ಯರನ್ನು ಸನ್ಮಾನಿಸಲಾಯಿತು. ಜೊತೆಗೆ ಕಲಿಕೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಸಂಘದ ಅಭಿವೃದ್ಧಿಗೆ ಸಹಕರಿಸಿದ ಹರಿಪ್ರಸಾದ್ ಕೆದಿಲಾಯ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸದಸ್ಯೆ ಅಶ್ವತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಧ್ಯಾ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕಿ ರೋಸ್ಲಿನ್ ವಂದಿಸಿದರು. ಸಿಬ್ಬಂದಿ ವೇದಾವತಿ ಸಹಕರಿಸಿದರು.






