ಕೊಕ್ಕಡ: ನಿಡ್ಲೆಯಲ್ಲಿ 34ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ

ಶೇರ್ ಮಾಡಿ

ಕೊಕ್ಕಡ: ಸೇವಾಭಾರತಿ ಕನ್ಯಾಡಿ ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಡ್ಲೆ, ಗ್ರಾಮ ಪಂಚಾಯತ್, ನಿಡ್ಲೆ ಹಾಗೂ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ, ನಿಡ್ಲೆ ಇದರ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಮಹಿಳೆಯರಿಗಾಗಿ ಉಚಿತ 34ನೇ ಟೈಲರಿಂಗ್‌ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಸೆ.20ರಂದು ನಿಡ್ಲೆಯಲ್ಲಿ ಜರಗಿತು.

ಶಿಬಿರ ಸಮಾರೋಪದ ಅಧ್ಯಕ್ಷತೆ ವಹಿಸಿದ ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಧನಂಜಯ ಗೌಡ ಅವರು ಮಾತನಾಡಿ, ಟೈಲರಿಂಗ್ ಕಲಿಯುವುದು ಸ್ವ-ಉದ್ಯೋಗದತ್ತ ಮುನ್ನಡೆಯುವ ಪ್ರಮುಖ ಹೆಜ್ಜೆ. ಕಲಿತ ವಿದ್ಯೆಯನ್ನು ಅರ್ಧಕ್ಕೆ ಕೈಬಿಡದೆ ಮುಂದುವರಿಸಿಕೊಂಡು ಹೋಗಿ, ಜೀವನದಲ್ಲಿ ಸ್ವಾವಲಂಬಿಗಳಾಗಿ ಎಂದು ಶಿಬಿರಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕನ್ಯಾಡಿ ಸೇವಾಭಾರತಿ ಸಲಹಾ ಮಂಡಳಿ ಸದಸ್ಯರು ಹಾಗೂ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ಎ. ಜಯಕುಮಾರ್ ಶೆಟ್ಟಿ ಅವರು ಮಾತನಾಡಿ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವುದು ಕಾಲದ ಅಗತ್ಯ. ಆಸಕ್ತಿ, ಪರಿಶ್ರಮ ಇಟ್ಟಾಗ ಯಾವುದೂ ಅಸಾಧ್ಯವಲ್ಲ. ಯಾವ ಕೆಲಸಕ್ಕೂ ತೊಡಗಿದರೆ ಅದಕ್ಕೆ ತಕ್ಕ ಫಲ ದೊರಕುತ್ತದೆ ಎಂದು ಮಹಿಳೆಯರಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.

ಶಿಬಿರದ ತರಬೇತುದಾರ್ತಿ ರಜನಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ ಗೌರವಧನ ನೀಡಿ ಕೃತಜ್ಞತೆ ಸಲ್ಲಿಸಲಾಯಿತು. ನಂತರ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀ ದುರ್ಗಾ ಮಾತೃ ಮಂಡಳಿಯ ಕಾರ್ಯದರ್ಶಿ ಪೂರ್ಣಿಮಾ, ನಿಡ್ಲೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ಯಾಮಲಾ, ಬೆಳ್ತಂಗಡಿ ಸಂಜೀವಿನಿ ಮಹಿಳಾ ಒಕ್ಕೂಟ ಕೃಷಿಯೇತರ ಚಟುವಟಿಕೆಗಳ ವಿಭಾಗೀಯ ಮ್ಯಾನೇಜರ್ ನಿತೀಶ್, ವಲಯ ಮೇಲ್ವಿಚಾರಕಿ ವೀಣಾಶ್ರೀ, ಅಭಿವೃದ್ಧಿ ಅಧಿಕಾರಿ ದಿನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಟ್ಟು 30 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸುಮನ ಸ್ವಾಗತಿಸಿದರು, ಡಾಕ್ಯುಮೆಂಟೇಶನ್, ಮಾನಿಟರಿಂಗ್ ಮತ್ತು ಇವಲ್ಯೂವೇಟಿಂಗ್ ಕಾರ್ಡಿನೇಟರ್ ಸುಮ ಕಾರ್ಯಕ್ರಮ ನಿರೂಪಿಸಿದರು, ಹೇಮಾವತಿ ವಂದಿಸಿದರು.

  •  

Leave a Reply

error: Content is protected !!