ಗುಂಡ್ಯ: ಕೆಎಸ್‌ಆರ್‌ಟಿಸಿ ಬಸ್‌ಗಳ ಡಿಕ್ಕಿ – 9 ಮಂದಿಗೆ ಗಾಯ, ಹೆದ್ದಾರಿ ಬಂದ್

ಶೇರ್ ಮಾಡಿ

ನೆಲ್ಯಾಡಿ: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾನುವಾರ ಮಧ್ಯಾಹ್ನ ಗುಂಡ್ಯ ಸಮೀಪ ಭೀಕರ ಅಪಘಾತ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳೆರಡು ಮುಖಾಮುಖಿ ಡಿಕ್ಕಿಯಾಗಿ ಒಟ್ಟು 9 ಮಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ಹೆದ್ದಾರಿ ಸಂಪೂರ್ಣ ಬಂದ್ ಆಗಿ, ಮಳೆ ಸುರಿಯುತ್ತಿರುವ ನಡುವೆಯೇ ವಾಹನಗಳು ಕಿ.ಮೀ ಗಟ್ಟಲೆ ದಟ್ಟಣೆ ಉಂಟಾದ ದೃಶ್ಯ ಕಂಡುಬಂದಿತು.

ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ರಾಜಹಂಸ ಬಸ್ ಹಾಗೂ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬಸ್ ನಿರ್ವಾಹಕ ಹಾಸನದ ನಿಂಗರಾಜು (52) ಗಂಭೀರ ಗಾಯಗೊಂಡಿದ್ದಾರೆ. ಜೊತೆಗೆ ಪ್ರಯಾಣಿಕರಾದ ಪಡಂಗಡಿ ಮೂಲದ ಗಿರಿಜಾ (62), ಅವರ ಮಗಳು ಪ್ರಮೀಳಾ (38), ಮೊಮ್ಮಗ ಮನೀಷ್ (14), ಧರ್ಮಸ್ಥಳದ ಪ್ರೇಮಲತಾ (48), ಚನ್ನಪಟ್ಟಣದ ಪ್ರಭಾ (53), ಉತ್ತರ ಕರ್ನಾಟಕ ಮೂಲದ ನಂದೀಶ್ (30), ಬೆಂಗಳೂರು ಮೂಲದ ಸಾವಿತ್ರಮ್ಮ (40), ಸಕಲೇಶಪುರದ ಅಚ್ಯುತ ಆಚಾರ್ಯ (56) ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆಯಿಂದಾಗಿ ಹೆದ್ದಾರಿ ಸಂಪೂರ್ಣವಾಗಿ ಬಂದ್ ಆಗಿ ಕಿ.ಮೀ ಗಟ್ಟಲೆ ವಾಹನಗಳ ಉದ್ದದ ಸಾಲಿನಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ರಸ್ತೆ ಮಧ್ಯೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಪ್ರವಾಸಿಗರು ಸುಮಾರು ಮೂರು ಗಂಟೆಗಳ ಕಾಲ ವಾಹನಗಳಲ್ಲಿ ಸಿಲುಕಿಕೊಂಡರು.

ಹೈವೇಹೈವೇ ಪೆಟ್ರೋಲ್ ಪೊಲೀಸರು ಹಾಗೂ ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.

  •  

Leave a Reply

error: Content is protected !!