ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜು ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ “ನಶಾಮುಕ್ತ ಭಾರತ ಅಭಿಯಾನ” ದಡಿಯಲ್ಲಿ ಒಂದು ವಾರ ಕಾಲ ನಡೆದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಬುಧವಾರ ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಅದ್ಧೂರಿಯಾಗಿ ನೆರವೇರಿತು.

ಕಾರ್ಯಕ್ರಮದ ಮುಖ್ಯಅತಿಥಿಗಳಾದ ನೆಲ್ಯಾಡಿ ಬೆಥನಿ ವಿದ್ಯಾ ಸಂಸ್ಥೆಯ ಸಂಚಾಲಕ ಫಾ.ಡಾ.ವರ್ಗೀಸ್ ಕೈಪನಡ್ಕ ಓಐಸಿ ಅವರು ಮಾತನಾಡಿ ಇಂತಹ ಶಿಬಿರಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸತ್ಕರ್ಮ, ಸಹಬಾಳ್ವೆ, ಸಹೋದರತ್ವ ಮತ್ತು ಪರಸ್ಪರ ಸಹಾಯ ಹಸ್ತದ ಮನೋಭಾವ ಬೆಳೆಸಲು ಸಾಧ್ಯವಾಗುತ್ತದೆ. ಒಳ್ಳೆಯ ಕುಟುಂಬ ಹಾಗೂ ಜವಾಬ್ದಾರಿಯುತ ಜೀವನ ನಡೆಸಲು ಇಂಥ ಶಿಬಿರಗಳು ದಾರಿದೀಪವಾಗುತ್ತವೆ ಎಂದು ಹೇಳಿದರು.

ರೆಂಜಿಲಾಡಿ ಬೀಡು ಅರಸರಾದ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್ ಮಾತನಾಡಿ, ನಮ್ಮ ದೇಶದ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲರು ಮಧ್ಯಮ ವರ್ಗದಿಂದ ಬಂದವರು ಎಂಬುದು ಹೆಮ್ಮೆ, ನಮ್ಮನ್ನು ಮಧ್ಯಮ ವರ್ಗದಿಂದ ಬಂದವರೇ ಆಳುತ್ತಿರುವುದು ಸಂತೋಷದ ವಿಷಯವಾಗಿದೆ. ಶಿಬಿರಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಬದ್ಧತೆ, ಬುದ್ಧಿವಂತಿಕೆ, ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯ. ಶಿಕ್ಷಕರು ಹಾಗೂ ಹೆತ್ತವರ ಮಾತನ್ನು ಪಾಲಿಸುವುದರಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕ ಫಾ.ನೋಮಿಸ್ ಕುರಿಯಾಕೋಸ್ ವಹಿಸಿದರು. ಪ್ರಾಚಾರ್ಯ ಜಾರ್ಜ್ ಟಿ.ಎಸ್. ಸಮಾರೋಪ ಭಾಷಣ ಮಾಡಿದರು. ವೇದಿಕೆಯಲ್ಲಿ ಪ್ರಾಚಾರ್ಯ ಏಲಿಯಾಸ್ ಎಂ.ಕೆ. ಹಾಗೂ ಶಿಬಿರಾಧಿಕಾರಿ, ಉಪನ್ಯಾಸಕ ವಿಶ್ವನಾಥ ಶೆಟ್ಟಿ.ಕೆ. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪದವಿಪೂರ್ವ ಕಾಲೇಜು ವತಿಯಿಂದ ಫಾ.ನೋಮಿಸ್ ಕುರಿಯಾಕೋಸ್ ಹಾಗೂ ವಿಶ್ವನಾಥ ಶೆಟ್ಟಿ.ಕೆ. ಅವರನ್ನು ಸನ್ಮಾನಿಸಲಾಯಿತು.

ಶಿಬಿರಾರ್ಥಿಗಳು ಶಿಬಿರದ ಅನುಭವಗಳನ್ನು ಹಂಚಿಕೊಂಡರು. ಶಿಬಿರಾಧಿಕಾರಿ ವಿಶ್ವನಾಥ ಶೆಟ್ಟಿ.ಕೆ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

  •  

Leave a Reply

error: Content is protected !!