

ನೇಸರ ನ್ಯೂಸ್
ಸುಳ್ಯ ನಗರ ಸಮೀಪದ ನಾಗಪಟ್ಟಣದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬುಲೆಟ್ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಶುಕ್ರವಾರ ನಡೆದಿದೆ.
ಕೇರಳದ ಕಲ್ಲಪಳ್ಳಿಯ ಮೂಲೆಹಿತ್ಲು ನಿವಾಸಿ ಹಾಗೂ ವೃತ್ತಿಯಿಂದ ಕೃಷಿಕರಾಗಿದ್ದ ಪ್ರದೀಪ್ (40) ಮೃತಪಟ್ಟವರು.
ಮೃತ ಪ್ರದೀಪ್ ಅವರು ಸುಳ್ಯದಿಂದ ಕಲ್ಲಪಳ್ಳಿ ಕಡೆಗೆ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಎದುರು ದಿಕ್ಕಿನಿಂದ ಬರುತ್ತಿದ್ದ ದೋಸ್ತ್ ವಾಹನ ಸುಳ್ಯ–ಆಲೆಟ್ಟಿ ರಸ್ತೆಯ ನಾಗಪಟ್ಟಣ ಸೇತುವೆ ಬಳಿ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿಯಾಗಿದೆ.
ಘಟನೆಯ ತೀವ್ರತೆಯಿಂದ ಪ್ರದೀಪ್ ಗಂಭೀರವಾಗಿ ಗಾಯಗೊಂಡು ಅವರನ್ನು ಆಂಬ್ಯುಲೆನ್ಸ್ ಸಹಾಯದಿಂದ ಸುಳ್ಯ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾದರೂ, ಅಷ್ಟರಲ್ಲೇ ಗಾಯಾಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಪ್ರದೀಪ್ ಅವರು ತಾಯಿ, ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.






